
ಬೆಂಗಳೂರು: ನಗರದ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜಿನ ಸಿಇಟಿ (KCET) ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಲಾಗಿದೆ ಎಂಬ ಆರೋಪ ಕೇಳಿಬಂದು ಮತ್ತೆ ವಿವಾದಕ್ಕೆ ಕಾರಣವಾಗಿದೆ. ಏಪ್ರಿಲ್ 23ರಂದು ನಡೆದ ಪರೀಕ್ಷೆ ವೇಳೆ ಆನಂದ್ ಸುಧೀರ್ ರಾವ್ ಸೇರಿದಂತೆ ಹಲವು ವಿದ್ಯಾರ್ಥಿಗಳನ್ನು ತಪಾಸಣೆ ನೆಪದಲ್ಲಿ ತಡೆದ ಸಿಬ್ಬಂದಿ, ಜನಿವಾರ ತೆಗೆಯದಿದ್ದರೆ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಧಮಕಿ ಹಾಕಿದರೆಂಬ ಆರೋಪವಿದ್ದು, ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪೋಷಕರು ಅನಿವಾರ್ಯವಾಗಿ ಜನಿವಾರ ತೆಗೆಸಿಕೊಂಡು ಪರೀಕ್ಷೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಘಟನೆ ಬಹಿರಂಗವಾದ ಬಳಿಕ ಶಿಕ್ಷಣ ಇಲಾಖೆ ಮತ್ತು ಸಿಇಟಿ ಸೆಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರು ನೀಡದಂತೆ ಪೋಷಕರಿಂದ ಪತ್ರ ಬರೆಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಧಾರ್ಮಿಕ ಹಕ್ಕಿಗೆ ಧಕ್ಕೆ ತರುವ ಇಂತಹ ಘಟನೆಗಳ ವಿರುದ್ಧ ಪೋಷಕರು ಹಾಗೂ ಧಾರ್ಮಿಕ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಳೆದ ವರ್ಷವೂ ಶಿವಮೊಗ್ಗ ಮತ್ತು ಬೀದರ್ನಲ್ಲಿ ಇದೇ ರೀತಿಯ ಘಟನೆಗಳು ನಡೆದಿದ್ದ ಹಿನ್ನೆಲೆ ಈ ವರ್ಷವೂ ಜನಿವಾರ ವಿವಾದ ಮರುಕಳಿಸಿದೆ ಎಂಬ ಮಾತು ಕೇಳಿಬರುತ್ತಿದೆ, ಈ ಕುರಿತು ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿದ್ದು ಸರ್ಕಾರಕ್ಕೆ ನೋಟಿಸ್ ಜಾರಿಯಾಗಿದೆ.




