
ಹುಬ್ಬಳ್ಳಿ: ಒಂದು ಗಂಟೆ ಆಗಸದಲ್ಲಿ ಗಿರಕಿ ಹೊಡೆದು ಪ್ರಯಾಣಿಕರ ಎದೆ ನಡುಗಿಸಿದ ‘ಫ್ಲೈ 91’ ವಿಮಾನದ ಘಟನೆ ಹುಬ್ಬಳ್ಳಿಯಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಬೆಂಗಳೂರು–ಹುಬ್ಬಳ್ಳಿ ಮಾರ್ಗದ Fly91 ವಿಮಾನವು ಮಂಗಳವಾರ ಸಂಜೆ ಹವಾಮಾನ ವೈಪರೀತ್ಯದಿಂದಾಗಿ ನಿಗದಿತ ಸಮಯವಾದ ರಾತ್ರಿ 8.15ಕ್ಕೆ ಲ್ಯಾಂಡ್ ಆಗಲು ಸಾಧ್ಯವಾಗದೆ, ಸುರಕ್ಷತೆ ದೃಷ್ಟಿಯಿಂದ ಪೈಲಟ್ ವಿಮಾನವನ್ನು ಹುಬ್ಬಳ್ಳಿ ಮತ್ತು ದಾಂಡೇಲಿ ಸುತ್ತಮುತ್ತಲಿನ ಆಗಸದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹಾರಾಟ ನಡೆಸಿದರು. ಬಳಿಕ ಪರಿಸ್ಥಿತಿ ಸುಧಾರಿಸಿದ ನಂತರ ರಾತ್ರಿ 9.40ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಉಂಟಾದರೂ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ ಮೂರು ದಿನಗಳಲ್ಲಿ ಇದು ಎರಡನೇ ಘಟನೆ ಎಂಬುದು ಗಮನಾರ್ಹವಾಗಿದ್ದು, ಇತ್ತೀಚೆಗೆ ಇದೇ ಸಂಸ್ಥೆಯ ಹೈದರಾಬಾದ್–ಹುಬ್ಬಳ್ಳಿ ವಿಮಾನವೂ ಹವಾಮಾನ ಕಾರಣದಿಂದ ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಡಿ ಬಳಿಕ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿತ್ತು. ಈ ಸರಣಿ ಘಟನೆಗಳಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದ ಹವಾಮಾನ ಪರಿಸ್ಥಿತಿ ಮತ್ತು ವಿಮಾನ ಕಾರ್ಯಾಚರಣೆ ಕುರಿತಾಗಿ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, “ಹವಾಮಾನ ವೈಪರೀತ್ಯವೇ ಕಾರಣವಾದರೆ ಕೇವಲ ಫ್ಲೈ 91 ವಿಮಾನಗಳಿಗೆ ಮಾತ್ರ ಯಾಕೆ ಪದೇ ಪದೇ ತೊಂದರೆ?” ಎಂಬ ಪ್ರಶ್ನೆಯನ್ನು ಎತ್ತುತ್ತಿದ್ದಾರೆ.




