
ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಜೆಡಿಎಸ್ ಆರಂಭಿಸಿರುವ ಬೃಹತ್ ಪಾದಯಾತ್ರೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೂಡ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಜೆಡಿಎಸ್ ಯುವ ಘಟಕದ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ಮುಂದುವರಿಯಲಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಬಿಡದಿಯಿಂದ ಮೈಸೂರು ರಸ್ತೆ ನೈಸ್ ಜಂಕ್ಷನ್ವರೆಗೆ ಸುಮಾರು 16 ಕಿಲೋಮೀಟರ್ ಪಾದಯಾತ್ರೆ ನಡೆಯಲಿದೆ. ನಿನ್ನೆ ಮೊದಲ ದಿನ ಬಿಡದಿಯಿಂದ ಸುಮಾರು 7 ಕಿಲೋಮೀಟರ್ ದೂರವನ್ನು ಕಾರ್ಯಕರ್ತರು ಕ್ರಮಿಸಿದ್ದರು. ಬಿಡದಿ ಟೌನ್ಶಿಪ್ ಯೋಜನೆಯಿಂದ ರೈತರು ಹಾಗೂ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿರುವ ಜೆಡಿಎಸ್, ಯೋಜನೆಯನ್ನು ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದೆ. ನಿನ್ನೆಯ ಪಾದಯಾತ್ರೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಆರ್. ಅಶೋಕ್ ಚಾಲನೆ ನೀಡಿದ್ದರು. ಇದೀಗ ಹಿರಿಯ ನಾಯಕರು, ಪಕ್ಷದ ಮುಖಂಡರು ಹಾಗೂ ಯುವ ಕಾರ್ಯಕರ್ತರು ಒಂದಾಗಿ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. ಬಿಡದಿ ಟೌನ್ಶಿಪ್ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ಇಂದು ಮತ್ತಷ್ಟು ತೀವ್ರಗೊಳ್ಳಲಿದೆ.




