ಕಾರ್ಕಳ: ಪರಿಸರ ಸಂರಕ್ಷಣೆ ಹಾಗೂ ಹಸಿರು ವಲಯ ವೃದ್ಧಿಸುವ ಉದ್ದೇಶದಿಂದ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ‘ಧನ್ಯವಾದ್ – ವೃಕ್ಷ ಸಂವರ್ಧನೆ ಹಾಗೂ ಸಂರಕ್ಷಣೆ ಯೋಜನೆ’ ಅಡಿಯಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು. ಆಗಸ್ಟ್ 9ರಂದು ಬೆಳಗ್ಗೆ ಕಾರ್ಕಳದ ಬಂಗ್ಲೆ ಗುಡ್ಡೆ ಸಮೀಪದ ಕಜೆ ಪರಿಸರದಲ್ಲಿರುವ ‘ರೋಟರಿ ವನ’ದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೊಟೇರಿಯನ್ ಡಾ. ಭರತೇಶ್ ಆದಿರಾಜ್ ಅವರ ಮಾರ್ಗದರ್ಶನದಲ್ಲಿ ಹಾಗೂ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಅಧ್ಯಕ್ಷ ರೊ. ಮಂಜುನಾಥ ಹೆಗ್ಡೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಪ್ರಭೇದಗಳ 50ಕ್ಕೂ ಅಧಿಕ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ನ ಪೂರ್ವ ಅಧ್ಯಕ್ಷರಾದ ರೊ. ಉಪೇಂದ್ರ ವಾಗ್ಲೆ, ರೊ. ಪ್ರಕಾಶ್ ವಾಗ್ಲೆ, ರೊ. ಸೋಮಶೇಖರ್ ಹಾಗೂ ರೊ. ಸುಜಯ್ ಉಪಸ್ಥಿತರಿದ್ದು, ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದರು. ಇದೇ ವೇಳೆ, ರೊ. ಸುಜಯ್ ಅವರು ವೃಕ್ಷ ಸಂವರ್ಧನೆಗೆ ಅಗತ್ಯವಿರುವ ಕಾಮಗಾರಿಗಳ ವ್ಯವಸ್ಥೆಯನ್ನು ಕಲ್ಪಿಸಿದರು. ಪರಿಸರ ಸಂರಕ್ಷಣೆಯ ಜೊತೆಗೆ ನೆಟ್ಟ ಗಿಡಗಳ ಪೋಷಣೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಮುಂದಾಗಿದೆ.
ವರದಿ: ಅರುಣ್ ಭಟ್ ಕಾರ್ಕಳ
