ದೆಹಲಿ: ಲೋಕಸಭೆಯಲ್ಲಿ ಇಂದು ಕೇಂದ್ರ ಸರ್ಕಾರ ನಾಲ್ಕು ಪ್ರಮುಖ ಮಸೂದೆಗಳನ್ನು ಮಂಡಿಸಲು ಸಿದ್ಧತೆ ನಡೆಸಿದ್ದು, ನ್ಯಾಯಾಂಗ ಸುಧಾರಣೆಯಿಂದ ಹಿಡಿದು ರಾಜ್ಯದ ಹೆಸರು ಬದಲಾವಣೆ ಹಾಗೂ ಖನಿಜ ಮತ್ತು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ಪ್ರಸ್ತಾವನೆಗಳು ಈ ಮಸೂದೆಗಳಲ್ಲಿ ಸೇರಿವೆ. ಮೊದಲನೆಯದಾಗಿ ‘ಟ್ರಿಬ್ಯೂನಲ್ ರಿಫಾರ್ಮ್ಸ್ ಮಸೂದೆ, 2026’ ಅನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಡಿಸಲಿದ್ದಾರೆ. ನ್ಯಾಯಮಂಡಳಿಗಳ ಕಾರ್ಯವೈಖರಿಯಲ್ಲಿ ಸುಧಾರಣೆ, ಸದಸ್ಯರ ನೇಮಕಾತಿ ಮತ್ತು ಸೇವಾ ನಿಯಮಗಳಲ್ಲಿ ಪಾರದರ್ಶಕತೆ ಹಾಗೂ ಏಕರೂಪತೆ ತರುವುದು ಇದರ ಉದ್ದೇಶವಾಗಿದೆ. ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗ ಸ್ಥಾಪನೆಯ ಪ್ರಸ್ತಾಪವೂ ಮಸೂದೆಯಲ್ಲಿದೆ. ಇನ್ನು ‘ಕೇರಳ ಹೆಸರು ಬದಲಾವಣೆ ಮಸೂದೆ, 2026’ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಲಿದ್ದು, ಸಂವಿಧಾನದ ಮೊದಲ ಅನುಸೂಚಿಗೆ ತಿದ್ದುಪಡಿ ತಂದು, ‘ಕೇರಳ’ ರಾಜ್ಯದ ಅಧಿಕೃತ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ. ಮೂರನೇಯದಾಗಿ ‘ಗಣಿ ಮತ್ತು ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣ ತಿದ್ದುಪಡಿ ಮಸೂದೆ, 2026’ ಮಂಡನೆಯಾಗಲಿದೆ. ಕೇಂದ್ರ ಗಣಿ ಸಚಿವ ಜಿ. ಕಿಶನ್ ರೆಡ್ಡಿ ಈ ಮಸೂದೆಯನ್ನು ಮಂಡಿಸಲಿದ್ದು, 1957ರ ಗಣಿ ಮತ್ತು ಖನಿಜ ಕಾಯ್ದೆಗೆ ತಿದ್ದುಪಡಿ ತಂದು ಖನಿಜ ವಲಯದ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶ ಹೊಂದಿದೆ. ನಾಲ್ಕನೇಯದಾಗಿ ‘ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ ತಿದ್ದುಪಡಿ ಮಸೂದೆ, 2026’ ಅನ್ನು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮಂಡಿಸಲಿದ್ದಾರೆ. 1962ರ ಎನ್ಸಿಡಿಸಿ ಕಾಯ್ದೆಗೆ ತಿದ್ದುಪಡಿ ತರುವುದರ ಜೊತೆಗೆ, ಸಹಕಾರ ವಲಯಕ್ಕೆ ಸಾಲ ಸೌಲಭ್ಯಗಳನ್ನು ಮತ್ತಷ್ಟು ವಿಸ್ತರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಒಟ್ಟಿನಲ್ಲಿ, ನ್ಯಾಯಮಂಡಳಿ ಸುಧಾರಣೆ, ಕೇರಳ ರಾಜ್ಯದ ಹೆಸರು ಬದಲಾವಣೆ, ಖನಿಜ ವಲಯದ ಅಭಿವೃದ್ಧಿ ಹಾಗೂ ಸಹಕಾರ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಾಲ್ಕು ಪ್ರಮುಖ ಮಸೂದೆಗಳು ಇಂದು ಲೋಕಸಭೆಯ ಗಮನ ಸೆಳೆಯಲಿವೆ.
