
ಚಿಕ್ಕಮಗಳೂರು: ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಂದ ₹50 ಸಾವಿರ ಹಣ ಪಡೆದು ವಂಚಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಯೋಗಾನಂದ ಅವರಿಗೆ ಆಗಸ್ಟ್ 8ರಂದು ವಾಟ್ಸಾಪ್ ಸಂದೇಶ ಬಂದಿದ್ದು, ಅದರ ಡಿಪಿಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಯವರ ಫೋಟೋ ಬಳಸಲಾಗಿತ್ತು. ವಾಟ್ಸಾಪ್ ಖಾತೆಯಲ್ಲಿ ‘ಬನ್ವರ್ ಸಿಂಗ್ ಮೀನಾ’ ಎಂಬ ಹೆಸರು ಹಾಗೂ ವಿದೇಶಿ ಮೊಬೈಲ್ ನಂಬರ್ ಕಾಣಿಸಿಕೊಂಡಿತ್ತು. ಸಂದೇಶ ಕಳುಹಿಸಿದ ವ್ಯಕ್ತಿ ತಾನು ಸಭೆಯಲ್ಲಿದ್ದು, ಆನ್ಲೈನ್ ಬ್ಯಾಂಕಿಂಗ್ ವ್ಯವಹಾರದಲ್ಲಿ ಸಮಸ್ಯೆಯಾಗಿದೆ ಎಂದು ಹೇಳಿ, ಮತ್ತೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೆ ₹50 ಸಾವಿರ ಜಮೆ ಮಾಡುವಂತೆ ಮನವಿ ಮಾಡಿದ್ದಾನೆ. ಹಣವನ್ನು ನಂತರ ವಾಪಸ್ ನೀಡುವುದಾಗಿ ತಿಳಿಸಿದ್ದರಿಂದ ಯೋಗಾನಂದ ಅವರು ಮಂಡ್ಯ ನಗರದ ICICI ಬ್ಯಾಂಕ್ ಎಟಿಎಂ ಮೂಲಕ ಹಂತ ಹಂತವಾಗಿ ಒಟ್ಟು ₹50 ಸಾವಿರವನ್ನು ಸೂಚಿಸಿದ ಖಾತೆಗೆ ಜಮೆ ಮಾಡಿದ್ದಾರೆ. ಇದಾದ ಬಳಿಕ ಮತ್ತೆ ₹50 ಸಾವಿರ ಹಣ ಹಾಕುವಂತೆ ಸಂದೇಶ ಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಯೋಗಾನಂದ ಅವರು ಜಿಲ್ಲಾಧಿಕಾರಿಯವರ ಪಿಎಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಯವರು ಯಾವುದೇ ಸಭೆಯಲ್ಲಿ ಇಲ್ಲ ಹಾಗೂ ಇದೇ ರೀತಿಯ ಸಂದೇಶಗಳು ಬೇರೆ ವ್ಯಕ್ತಿಗಳಿಗೂ ಬರುತ್ತಿವೆ ಎಂಬ ಮಾಹಿತಿ ದೊರೆತಿದೆ. ಈ ಸಂಬಂಧ ಯೋಗಾನಂದ ಅವರು ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ವಂಚಿಸಿದ ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಪ್ರಕರಣವು ಐಟಿ ಕಾಯ್ದೆಯ ಕಲಂ 66(C), 66(D) ಹಾಗೂ BNS ಕಲಂ 318(4) ಅಡಿಯಲ್ಲಿ ದಾಖಲಾಗಿದೆ.




