
ಕಡೂರು: ಮಾವಿನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪದ ಮೇಲೆ ಮೂವರನ್ನು ಯಗಟಿ ಪೊಲೀಸರು ಬಂಧಿಸಿದ್ದು, ₹6 ಸಾವಿರ ನಗದು ಸೇರಿದಂತೆ ಇಸ್ಪೀಟ್ ಎಲೆಗಳು, ಟಾರ್ಪಲ್ ಹಾಗೂ ಟಾರ್ಚ್ನ್ನು ವಶಪಡಿಸಿಕೊಂಡಿದ್ದಾರೆ. ಆಗಸ್ಟ್ 8ರ ಮುಂಜಾನೆ ಯಗಟಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳದಲ್ಲಿ 5 ರಿಂದ 6 ಮಂದಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ ಪಿಎಸ್ಐ ಶಾಹಿದ್ ಅಫ್ರಿದಿ ಅವರ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಲಾಯಿತು. ದಾಳಿ ವೇಳೆ ಮೂವರು ಆರೋಪಿಗಳಾದ ಶಶಿಕುಮಾರ್ (32), ಉಮೇಶ್ (39) ಹಾಗೂ ಇಲಿಯಾಜ್ (47) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ₹6,000 ನಗದು, 52 ಇಸ್ಪೀಟ್ ಎಲೆಗಳು, ಒಂದು ಟಾರ್ಚ್ ಹಾಗೂ ಹಸಿರು-ಕಪ್ಪು ಬಣ್ಣದ ಪ್ಲಾಸ್ಟಿಕ್ ಟಾರ್ಪಲ್ ಪತ್ತೆಯಾಗಿದ್ದು, ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಳ್ಳಲಾಗಿದೆ. ಯಾವುದೇ ಪರವಾನಗಿ ಇಲ್ಲದೆ ಹಣವನ್ನು ಪಣವಾಗಿಟ್ಟು ಅಂದರ್–ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ಮೊ.ನಂ.91/2026ರಂತೆ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87 ಅಡಿ ಪ್ರಕರಣ ದಾಖಲಿಸಲಾಗಿದೆ.




