
ಶೃಂಗೇರಿ: ಜನರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಶೃಂಗೇರಿ ತಾಲ್ಲೂಕಿನ ಕೆರೆ ಗ್ರಾಮ ಪಂಚಾಯಿತಿಯಲ್ಲಿ ‘ಪೂರ್ಣ ವಿಮೆ ಸುರಕ್ಷಿತ ಗ್ರಾಮ’ ಉದ್ದೇಶದಡಿ ವಿಶೇಷ ನೋಂದಣಿ ಹಾಗೂ ಜಾಗೃತಿ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ NRLM ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಆದರ್ಶ್ ಮಾತನಾಡಿ, ಗ್ರಾಮದ ಎಲ್ಲಾ ಅರ್ಹ ನಾಗರಿಕರು ವಿಮಾ ವ್ಯಾಪ್ತಿಗೆ ಒಳಪಟ್ಟು ತಮ್ಮ ಕುಟುಂಬದ ಭವಿಷ್ಯಕ್ಕೆ ಭದ್ರತೆ ಒದಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಸಹಾಯಕ ನಿರ್ದೇಶಕ ರವಿ ಕುಮಾರ್ ಚೌಹಾಣ್ ಮಾತನಾಡಿ, ಅನಿರೀಕ್ಷಿತ ಅಪಘಾತ ಅಥವಾ ಸಾವು ಸಂಭವಿಸಿದ ಸಂದರ್ಭದಲ್ಲಿ ಕುಟುಂಬದ ಮೇಲೆ ಬೀಳುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು PMSBY ಮತ್ತು PMJJBY ಯೋಜನೆಗಳು ಸಹಕಾರಿಯಾಗುತ್ತವೆ. ಕಡಿಮೆ ಪ್ರೀಮಿಯಂನಲ್ಲಿ ದೊರೆಯುವ ಈ ವಿಮಾ ಯೋಜನೆಗಳ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಜೊತೆಗೆ ವಿಮಾ ಪಾಲಿಸಿಯಲ್ಲಿ ನಾಮಿನಿಯ ವಿವರಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು. PMSBY ಅಂದರೆ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ. ವರ್ಷಕ್ಕೆ ₹20 ಪ್ರೀಮಿಯಂನಲ್ಲಿ ಅಪಘಾತ ವಿಮೆ ಪಡೆಯಬಹುದಾಗಿದ್ದು, ಅಪಘಾತದಿಂದ ಮರಣ ಅಥವಾ ಸಂಪೂರ್ಣ ಅಂಗವೈಕಲ್ಯ ಉಂಟಾದರೆ ₹2 ಲಕ್ಷದವರೆಗೆ ಹಾಗೂ ಭಾಗಶಃ ಅಂಗವೈಕಲ್ಯಕ್ಕೆ ₹1 ಲಕ್ಷದವರೆಗೆ ವಿಮಾ ರಕ್ಷಣೆ ದೊರೆಯುತ್ತದೆ. ಇನ್ನು PMJJBY, ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಡಿ ವರ್ಷಕ್ಕೆ ₹436 ಪ್ರೀಮಿಯಂನಲ್ಲಿ ಜೀವ ವಿಮೆ ಪಡೆಯಬಹುದಾಗಿದ್ದು, ವಿಮಾದಾರರು ಯಾವುದೇ ಕಾರಣದಿಂದ ಮೃತಪಟ್ಟರೆ ನಾಮಿನಿಗೆ ₹2 ಲಕ್ಷ ವಿಮಾ ಮೊತ್ತ ದೊರೆಯುತ್ತದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅನ್ನಪೂರ್ಣ ಅವರು ಮಾತನಾಡಿ, ಕೆರೆ ಗ್ರಾಮ ಪಂಚಾಯಿತಿಯ ಎಲ್ಲಾ ಅರ್ಹ ನಾಗರಿಕರು ವಿಮೆ ಮಾಡಿಸಿಕೊಳ್ಳುವ ಮೂಲಕ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಿಕೊಳ್ಳಬೇಕು ಎಂದರು. NRLM ವಲಯ ಮೇಲ್ವಿಚಾರಕಿ ಸುಪ್ರಿತಾ ಹೆಗ್ಡೆ, “ಒಂದು ಕುಟುಂಬ ವಿಮೆ ಹೊಂದಿದರೆ ಒಂದು ಕುಟುಂಬಕ್ಕೆ ಭದ್ರತೆ, ಪ್ರತಿಯೊಂದು ಕುಟುಂಬ ವಿಮೆ ಹೊಂದಿದರೆ ಇಡೀ ಗ್ರಾಮಕ್ಕೆ ಭದ್ರತೆ” ಎಂಬ ಸಂದೇಶ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಜೀವಿನಿ ಒಕ್ಕೂಟದ ನಾಗರತ್ನ ಅವರು ವಿಮಾ ಯೋಜನೆಗಳ ಮಹತ್ವ ಅರಿತು ಪ್ರತಿಯೊಬ್ಬರೂ ವಿಮೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ BC ಸಖಿ ಶೈಲಾ, ಜ್ಯೋತಿ, GPLF ಸಿಬ್ಬಂದಿ ರಮ್ಯಾ, ಅನುರಾಧ, ರೇವತಿ, ರೂಪಕ, ಗ್ರಾಮ ಪಂಚಾಯಿತಿ ಸಿಬ್ಬಂದಿ, IEC ಸೌಮ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ನಂತರ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ವಿಮಾ ಯೋಜನೆಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಅರ್ಹ ಫಲಾನುಭವಿಗಳಿಂದ ವಿಮಾ ಪಾಲಿಸಿಗೆ ಅರ್ಜಿಗಳನ್ನು ಸ್ವೀಕರಿಸಿದರು. ಒಂದು ಕುಟುಂಬಕ್ಕೆ ವಿಮೆ — ಇಡೀ ಗ್ರಾಮಕ್ಕೆ ಭದ್ರತೆ ಎಂಬ ಸಂದೇಶದೊಂದಿಗೆ ಶಿಬಿರ ಗಮನ ಸೆಳೆಯಿತು.




