
ಚಿಕ್ಕಮಗಳೂರು: ಸಾರ್ವಜನಿಕ ರಸ್ತೆಯಲ್ಲಿ ಮಹಿಳೆಯೊಬ್ಬರನ್ನು ತಡೆದು ಅವಾಚ್ಯವಾಗಿ ನಿಂದಿಸಿ, ಲೈಂಗಿಕ ಕಿರುಕುಳ ನೀಡಿದಲ್ಲದೆ ಬೆದರಿಕೆ ಹಾಕಿದ ಆರೋಪದಡಿ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ ೨ರಂದು ಸಂಜೆ ಸುಮಾರು 4.30ರ ವೇಳೆಗೆ ಮಹಿಳೆಯೊಬ್ಬರು ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಹೊಕ್ಕಳ್ಳಿ ಅಶೋಕ ಎಂಬಾತ ಬೈಕ್ನಲ್ಲಿ ಬಂದು ದಾರಿ ತಡೆದು ಅವಾಚ್ಯವಾಗಿ ನಿಂದಿಸಿದ್ದು, ಈ ವೇಳೆ ಆರೋಪಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಕೂದಲು ಹಿಡಿದು ಎಳೆದಾಡಿ, ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಮರದ ದೊಣ್ಣೆಯಿಂದ ಕೈಗೆ ಹೊಡೆದು, ಮಹಿಳೆ ಹಾಗೂ ಆಕೆಯ ಪತಿಗೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಮಹಿಳೆ ಕೂಗಿಕೊಂಡಾಗ ಸ್ಥಳಕ್ಕೆ ಬಂದ ಸಂಬಂಧಿಕರು ಜಗಳವನ್ನು ಬಿಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಗಲಾಟೆಯ ಸಂದರ್ಭದಲ್ಲಿ ತನ್ನ ತಾಳಿ ಸರ ಬಿದ್ದಿದ್ದು, ಅದನ್ನು ಆರೋಪಿಯು ತೆಗೆದುಕೊಂಡು ಹೋಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಘಟನೆಯ ಬಳಿಕ ಕುಟುಂಬದವರೊಂದಿಗೆ ಚರ್ಚಿಸಿ ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ದೂರಿನ ಆಧಾರದ ಮೇಲೆ ಠಾಣಾ ಮೊ.ನಂ. 41/2026ರಂತೆ ಬಿಎನ್ಎಸ್ನ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.




