
ಶೃಂಗೇರಿ: ತಾಲೂಕು ಮಟ್ಟದ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಜ್ಞಾನಭಾರತಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಅಥರ್ವ 100 ಮೀಟರ್ ಓಟ, 200 ಮೀಟರ್ ಓಟ ಹಾಗೂ ಲಾಂಗ್ ಜಂಪ್ನಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ರೋಷನ್ 600 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, 4×100 ಮೀಟರ್ ರಿಲೇಯಲ್ಲಿ ಅಥರ್ವ, ರೋಷನ್, ಅನಿರುದ್ಧ ಹಾಗೂ ಚಿರಾಗ್ ಕೆ.ಸಿ. ಅವರ ತಂಡ ಪ್ರಥಮ ಸ್ಥಾನ ಗಳಿಸಿದೆ.
ಬಾಲಕಿಯರ ವಿಭಾಗದಲ್ಲಿಯೂ ಜ್ಞಾನಭಾರತಿ ವಿದ್ಯಾರ್ಥಿನಿಯರು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಾತ್ಯಾಯಿನಿ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದರೆ, ವಾರಿದಿ ಎತ್ತರ ಜಿಗಿತದಲ್ಲಿ ತೃತೀಯ ಹಾಗೂ ಲಿಖಿತ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕಿಯರ ವಾಲಿಬಾಲ್ನಲ್ಲಿ ಕಾತ್ಯಾಯಿನಿ, ಮಹತಿ, ಆದ್ವಿಕಾ, ಲಿಖಿತ, ಸಮನ್ವಿತ, ಭೂಮಿ, ಶ್ರಾವಣಿ, ಮನೋರಮ ಹಾಗೂ ಅನರ್ಘ್ಯ ಅವರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನೂ ಜ್ಞಾನಭಾರತಿ ಶಾಲೆ ತನ್ನದಾಗಿಸಿಕೊಂಡಿದ್ದು, ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹಲವು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಹೆಮ್ಮೆ ತಂದಿದ್ದಾರೆ. ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಶಂಕರ ನಾರಾಯಣ ಗುರೂಜಿ, ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.




