
ಕಾರ್ಕಳ: ಡಾ. ಶೇಖರ್ ಅಜೆಕಾರು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಸಮಾಜಮುಖಿ ಬದುಕಿನ ಮಹತ್ವವನ್ನು ಗಣ್ಯರು ಸ್ಮರಿಸಿದರು. ಮೂಡಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಮಾತನಾಡಿ, “ಐಶ್ವರ್ಯವಿಲ್ಲದೆಯೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂಬುದನ್ನು ದಿವಂಗತ ಡಾ. ಶೇಖರ್ ಅಜೆಕಾರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ” ಎಂದು ಹೇಳಿದರು. ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸಾಣೂರಿನ ರಾಜರಾಜೇಶ್ವರಿ ನ್ಯಾಷನಲ್ ಸ್ಕೂಲ್–ಕಾಲೇಜು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ, 2025–26ನೇ ಸಾಲಿನ ಡಾ. ಶೇಖರ್ ಅಜೆಕಾರು ರಾಜ್ಯ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ದಯಾನಂದ ಪೈ ಕುಂಟಾಡಿ ಅವರಿಗೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಮೋಹನ್ ಆಳ್ವ, ಶೇಖರ್ ಅಜೆಕಾರು ಅವರ ಸೃಜನಶೀಲತೆ, ಕನ್ನಡಪರ ಕಾಳಜಿ ಹಾಗೂ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸಿದರು. ಆದಿಗ್ರಾಮೋತ್ಸವ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ವಿನೂತನ ಕಾರ್ಯಕ್ರಮಗಳು ಅವರ ದೂರದೃಷ್ಟಿಗೆ ಸಾಕ್ಷಿಯಾಗಿವೆ ಎಂದರು. ಕರ್ನಾಟಕ ಕ್ವಾರಿ ಮತ್ತು ಕ್ರಶರ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಸಂಪತ್ತಿಗಿಂತ ಸಮಾಜಸೇವೆಯೇ ದೊಡ್ಡ ಸಂಪತ್ತು ಎಂಬುದನ್ನು ಶೇಖರ್ ಅಜೆಕಾರು ಸಾಬೀತುಪಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹಾಗೂ ಶಿಕ್ಷಣ ತಜ್ಞ ದೇವಿಪ್ರಸಾದ್ ಶೆಟ್ಟಿ ಕೂಡ ಮಾತನಾಡಿ, ಪತ್ರಿಕೋದ್ಯಮದ ಮಹತ್ವ ಹಾಗೂ ಸಮಾಜ ನಿರ್ಮಾಣದಲ್ಲಿ ಅದರ ಪಾತ್ರವನ್ನು ಒತ್ತಿಹೇಳಿದರು. ಸಮಾರಂಭದಲ್ಲಿ ದಿವಂಗತ ಡಾ. ಶೇಖರ್ ಅಜೆಕಾರು ಅವರ ಪತ್ನಿ ತಾರಾ ಅವರಿಗೆ ಕಿರು ಆರ್ಥಿಕ ನೆರವು ನೀಡಲಾಯಿತು. ಉಡುಪಿ ಜಿಲ್ಲಾ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ಅರುಣ್ ಭಟ್ ಕಾರ್ಕಳ




