
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ವಿಚಾರದಲ್ಲಿ ರಾಜಕೀಯ ಹೈಡ್ರಾಮಾಗಳು ಮುಂದುವರಿದಿದ್ದು, ಇಂದು ಕಾಂಗ್ರೆಸ್ ಅವಿಶ್ವಾಸ ನಿರ್ಣಯ ನಿಲುವಳಿ ನೋಟಿಸ್ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದಾರೆ. ತಮ್ಮ ಸ್ಥಾನಕ್ಕೆ ಆಗಸ್ಟ್ 14ರಂದು ರಾಜೀನಾಮೆ ನೀಡೋದಾಗಿ ಹೇಳಿದ್ದ ಹೊರಟ್ಟಿ, ಇದೀಗ ರಾಜೀನಾಮೆಗೆ ಸಮಯಾವಕಾಶ ಬೇಕು ಎಂದಿದ್ದಾರೆ ಎನ್ನಲಾಗಿದೆ. ಇನ್ನು ಡಿಕೆಶಿ ಭೇಟಿ ಬಳಿಕ ಅಸಮಾಧಾನದಿಂದಲೇ ಸಿಎಂ ನಿವಾಸದಿಂದ ಹೊರಟ್ಟಿ ಹೊರ ಬಂದ ದೃಶ್ಯಗಳು ಕೂಡ ಕಂಡುಬಂದಿದೆ. ಇನ್ನು ಸಿಎಂ ಡಿಕೆಶಿ ಭೇಟಿ ವಿಚಾರ ಸಂಬಂಧ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದು, ಮೊನ್ನೆ ನಾನು ಏನು ಹೇಳಿದ್ದೇನೋ ಅದಕ್ಕೆ ಬದ್ಧನಿದ್ದೇನೆ. ಅವರು ಅವಿಶ್ವಾಸ ನಿರ್ಣಯ ಮಂಡಿಸಿದ್ರೆ ಮಂಡಿಸಲಿ, ಕಾನೂನು ಪ್ರಕಾರ ಏನು ಬೇಕಾದರೂ ಮಾಡಲಿ ಎಂದು ಬೆಂಗಳೂರಿನ ಸದಾಶಿವನಗರದ ಸಿಎಂ ಡಿಕೆಶಿ ನಿವಾಸದ ಬಳಿ ಹೇಳಿದ್ದಾರೆ.




