
ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಪಾರಂಪರಿಕ ಸಂರಕ್ಷಣಾ ನಿಯಮಗಳ ಉಲ್ಲಂಘನೆ, ಅಕ್ರಮ ವಾಣಿಜ್ಯ ಚಟುವಟಿಕೆಗಳು ಹಾಗೂ ನಿಯಮಬಾಹಿರ ಹೋಂಸ್ಟೇಗಳ ಕಾರ್ಯಾಚರಣೆ ಆರೋಪಕ್ಕೆ ಸಂಬಂಧಿಸಿದಂತೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಹಂಪಿಯ ಪಾರಂಪರಿಕ ಪ್ರದೇಶಗಳಲ್ಲಿ ನಿಯಮ ಉಲ್ಲಂಘನೆಗೆ ಅವಕಾಶ ನೀಡಿದ ಆರೋಪದಡಿ ಒಟ್ಟು 54 ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಹೊಸಪೇಟೆ ಹಾಗೂ ಕೊಪ್ಪಳ ವ್ಯಾಪ್ತಿಯ ಸಹಾಯಕ ಆಯುಕ್ತರು, ತಹಸೀಲ್ದಾರ್ಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಉಪ ಲೋಕಾಯುಕ್ತರ ಮಾಹಿತಿಯಂತೆ, ಹಂಪಿ ಪಾರಂಪರಿಕ ಪ್ರಾಧಿಕಾರದ ಕೋರ್ ಝೋನ್, ಬಫರ್ ಝೋನ್ ಮತ್ತು ಪೆರಿಫೆರಲ್ ಝೋನ್ ಪ್ರದೇಶಗಳಲ್ಲಿ ಸುಮಾರು 200 ಅಕ್ರಮ ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪವಿದೆ. ಇದರ ಜೊತೆಗೆ ಹಂಪಿ ದೇವಾಲಯದ ಸಮೀಪದ ಜನತಾ ಕಾಲೋನಿಯಲ್ಲಿ 250ಕ್ಕೂ ಹೆಚ್ಚು ಅಕ್ರಮ ಹೋಂಸ್ಟೇಗಳು ತಲೆಎತ್ತಿವೆ ಎಂದು ತಿಳಿಸಲಾಗಿದೆ. ಹಂಪಿ ಹಾಗೂ ಗಂಗಾವತಿ ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿ ಮಾದಕ ದ್ರವ್ಯಗಳ ಜಾಲ ಮತ್ತು ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂಬ ದೂರುಗಳನ್ನೂ ಉಪ ಲೋಕಾಯುಕ್ತರು ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಕುರಿತು ಸೆಪ್ಟೆಂಬರ್ 1ರೊಳಗೆ ‘ಕ್ರಮ ಕೈಗೊಂಡ ವರದಿ’ ಸಲ್ಲಿಸುವಂತೆ ಉಪ ಲೋಕಾಯುಕ್ತರು ಆದೇಶಿಸಿದ್ದಾರೆ. ವಿಶ್ವ ಪಾರಂಪರಿಕ ತಾಣ ಹಂಪಿಯ ಐತಿಹಾಸಿಕ ಹಾಗೂ ಪಾರಂಪರಿಕ ಮಹತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಮಹತ್ವ ಪಡೆದಿದೆ.



