
ಬೆಂಗಳೂರು : ರಾಜ್ಯದಲ್ಲಿ ಮುಂದಿನ ವರ್ಷದಿಂದ ಎಲ್ಲಾ ಶಾಲೆಗಳಲ್ಲೂ ದ್ವಿಭಾಷಾ ನೀತಿಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವ ಗುರಿ ಹೊಂದಿರುವುದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಕಳೆದ ಸಾಲಿನ ಪರೀಕ್ಷಾ ಅವಧಿಯಲ್ಲಿ ದ್ವಿಭಾಷಾ ನೀತಿ ಕುರಿತು ಗೊಂದಲ ಉಂಟಾಗಿದ್ದ ಹಿನ್ನೆಲೆ ಸರ್ಕಾರ ಈ ಬಾರಿ ಸಮಗ್ರ ಸಿದ್ಧತೆಯೊಂದಿಗೆ ನೀತಿಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ರಾಜ್ಯದ ಶೇ.50ರಷ್ಟು ಶಾಲೆಗಳಲ್ಲಿ ಈಗಾಗಲೇ ದ್ವಿಭಾಷಾ ಮಾಧ್ಯಮ ಅಳವಡಿಕೆಯಾಗಿದ್ದು, ಮಕ್ಕಳು ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ ಎಂದು ತಿಳಿಸಿದರು. ಮುಂದಿನ ಒಂದು ವರ್ಷದೊಳಗೆ ಶೇ.100ರಷ್ಟು ಶಾಲೆಗಳಿಗೆ ದ್ವಿಭಾಷಾ ನೀತಿಯನ್ನು ವಿಸ್ತರಿಸುವ ಗುರಿ ಸರ್ಕಾರ ಹೊಂದಿದೆ ಎಂದೂ ಹೇಳಿದರು. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಜವಾಬ್ದಾರಿ ಸರ್ಕಾರದ್ದಾಗಿದ್ದು, ವ್ಯವಹಾರಿಕ ಭಾಷೆಯಾಗಿರುವ ಇಂಗ್ಲಿಷ್ ಕಲಿಕೆ ಕೂಡ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಈ ನೀತಿ ಜಾರಿಗೆ ತರಲಾಗುತ್ತಿದೆ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು. ಶಿಕ್ಷಣವೇ ಸಮಾಜದಲ್ಲಿ ಸಮಾನತೆ ತರಬಲ್ಲ ಪ್ರಬಲ ಅಸ್ತ್ರವಾಗಿದ್ದು, ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ರಾಜ್ಯದ ತ್ರಿಭಾಷಾ ಸೂತ್ರ ಕುರಿತು ಪರ-ವಿರೋಧ ಚರ್ಚೆಗಳು ಮುಂದುವರಿದಿದ್ದು, ಕೆಲವರು ಇದು ಭಾಷಾ ಪ್ರಾವೀಣ್ಯತೆ ಹಾಗೂ ಅರಿವಿನ ವೃದ್ಧಿಗೆ ಸಹಕಾರಿ ಎಂದು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಇದು ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಶೈಕ್ಷಣಿಕ ಹೊರೆ ಹಾಗೂ ಸ್ಥಳೀಯ ಭಾಷೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಕ್ಕಳು ಸಹಜವಾಗಿ ಹಲವು ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಹೊಂದಿದ್ದು, ಸೂಕ್ತ ಆಸಕ್ತಿ ಮತ್ತು ಸಂಪನ್ಮೂಲಗಳಿದ್ದರೆ ಮಾನವ ಮೆದುಳು 40 ಭಾಷೆಗಳವರೆಗೆ ಕಲಿಯಬಲ್ಲದು ಎಂದು ಸಂಶೋಧನೆಗಳು ಸೂಚಿಸುತ್ತಿವೆ ಎಂದು ತಜ್ಞರು ಹೇಳಿದ್ದಾರೆ.




