
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾಡಿದ ಭಾಷಣದಲ್ಲಿ ದೇಶದ ನಾಗರಿಕರು ಒಂದು ವರ್ಷದವರೆಗೆ ಚಿನ್ನಾಭರಣ ಖರೀದಿಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವಂತೆ ಮನವಿ ಮಾಡಿದ್ದು, ಈ ಹೇಳಿಕೆ ಇದೀಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ವಿದೇಶಿ ವಿನಿಮಯ ಸಂಗ್ರಹವನ್ನು ಸಂರಕ್ಷಿಸುವ ಉದ್ದೇಶದಿಂದ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ ದೇಶೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸುವಂತೆ ಕೂಡ ಪ್ರಧಾನಿ ಕರೆ ನೀಡಿದ್ದರು. ಭಾರತವು ವಿಶ್ವದ ಅತಿದೊಡ್ಡ ಚಿನ್ನದ ಆಮದುದಾರ ರಾಷ್ಟ್ರಗಳಲ್ಲಿ ಒಂದಾಗಿರುವ ಹಿನ್ನೆಲೆ, ಚಿನ್ನ ಖರೀದಿಗೆ ಹೆಚ್ಚಿನ ಪ್ರಮಾಣದ ವಿದೇಶಿ ಕರೆನ್ಸಿ ವ್ಯಯವಾಗುತ್ತಿದೆ. ಯುಎಸ್-ಇರಾನ್ ಸಂಘರ್ಷದಿಂದ ತೈಲ ಮತ್ತು ಅನಿಲದ ಬೆಲೆ ಏರಿಕೆಯಾಗಿರುವ ಕಾರಣ ಅಗತ್ಯ ವಸ್ತುಗಳ ಆಮದಿಗೆ ಡಾಲರ್ ಉಳಿಸುವ ಉದ್ದೇಶದಿಂದ ಸರ್ಕಾರ ಚಿನ್ನದ ಖರೀದಿಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವಂತೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಮದುವೆ ಹಾಗೂ ಸಮಾರಂಭಗಳಿಗಾಗಿ ಚಿನ್ನದ ಖರೀದಿಯನ್ನು ನಿಯಂತ್ರಿಸುವುದರಿಂದ ಜಾಗತಿಕ ಪೂರೈಕೆ ಸರಪಳಿ ವ್ಯತ್ಯಯ ಮತ್ತು ಕರೆನ್ಸಿ ಏರಿಳಿತದ ಸಂದರ್ಭಗಳಲ್ಲಿ ದೇಶದ ಆರ್ಥಿಕತೆಯನ್ನು ರಕ್ಷಿಸಲು ನೆರವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಹೇಳಿಕೆ ಬಳಿಕ ಆಭರಣ ವಲಯದ ಷೇರುಗಳು ಭಾರೀ ಮಾರಾಟದ ಒತ್ತಡಕ್ಕೆ ಒಳಗಾಗಿ ಮೌಲ್ಯ ಕಳೆದುಕೊಂಡಿವೆ. ಇದೇ ವೇಳೆ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷ ಲಂಡನ್ನಿಂದ 168 ಟನ್ ಚಿನ್ನವನ್ನು ಸಂಗ್ರಹಿಸಿದ್ದು, ಮಾರ್ಚ್ 2026ರ ವೇಳೆಗೆ ದೇಶದ ಚಿನ್ನದ ಸಂಗ್ರಹ 880 ಟನ್ಗೆ ತಲುಪಿದೆ ಎಂದು ವರದಿಯಾಗಿದೆ. ಪ್ರಸ್ತುತ ಭಾರತದ ಒಟ್ಟು ವಿದೇಶಿ ವಿನಿಮಯ ಸಂಗ್ರಹದಲ್ಲಿ ಚಿನ್ನದ ಪಾಲು 16 ಶೇಕಡಕ್ಕೆ ಏರಿಕೆಯಾಗಿದೆ. ಆರ್ಬಿಐ ಚಿನ್ನ ಖರೀದಿಸಿದಾಗ ಹೊಸ ಡಾಲರ್ ಹೊರಹರಿವು ಉಂಟಾಗುವುದಿಲ್ಲವಾದರೂ, ಸಾರ್ವಜನಿಕರು ಖರೀದಿಸುವ ಆಮದು ಚಿನ್ನದಿಂದ ಡಾಲರ್ ಹೊರಹೋಗಿ ರೂಪಾಯಿ ಮೌಲ್ಯ ಕುಸಿಯುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಏಪ್ರಿಲ್ 2026ರಿಂದ ಚಿನ್ನ ಮತ್ತು ಬೆಳ್ಳಿ ಆಭರಣಗಳ ಆಮದು ಮೇಲೂ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದ್ದು, ಹಲವು ಆಭರಣಗಳನ್ನು ‘ಮುಕ್ತ ಆಮದು’ ಪಟ್ಟಿಯಿಂದ ತೆಗೆದು ‘ನಿರ್ಬಂಧಿತ’ ಪಟ್ಟಿಗೆ ಸೇರಿಸಲಾಗಿದೆ. ಇನ್ನು ಮುಂದೆ ಚಿನ್ನಾಭರಣ ಆಮದು ಮಾಡಲು ಸರ್ಕಾರದ ವಿಶೇಷ ಪರವಾನಗಿ ಕಡ್ಡಾಯವಾಗಲಿದೆ.




