
ನವದೆಹಲಿ : ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆ 2026’ ಆರಂಭವಾಗಿದ್ದು, ದೇಶದ ಯುವಕ-ಯುವತಿಯರಿಗೆ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುವ ಸುವರ್ಣ ಅವಕಾಶ ಲಭ್ಯವಾಗಿದೆ. ಉದ್ಯೋಗಾಕಾಂಕ್ಷಿಗಳಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಈ ಯೋಜನೆಯಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 9,000 ರೂ. ಸ್ಟೈಫಂಡ್ ನೀಡಲಾಗುತ್ತಿದ್ದು, ಒಟ್ಟು 12 ತಿಂಗಳ ಇಂಟರ್ನ್ಶಿಪ್ ಅವಧಿಯಲ್ಲಿ ದೇಶದ ಅಗ್ರ 500 ಕಂಪನಿಗಳಲ್ಲಿ ಕಾರ್ಯಾನುಭವ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 21 ರಿಂದ 24 ವರ್ಷದೊಳಗಿನ ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಅಥವಾ ಯಾವುದೇ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಆದರೆ ಐಐಟಿ, ಐಐಎಂ ಅಥವಾ ಸಿಎ ಪದವೀಧರರು ಹಾಗೂ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ. ಮೀರಿದವರು ಮತ್ತು ಕುಟುಂಬದಲ್ಲಿ ಸರ್ಕಾರಿ ಉದ್ಯೋಗದಲ್ಲಿರುವವರು ಈ ಯೋಜನೆಗೆ ಅರ್ಹರಲ್ಲ ಎಂದು ತಿಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು pminternship.mca.gov.in ವೆಬ್ಸೈಟ್ ಮೂಲಕ ಮೇ 13ರೊಳಗೆ ಉಚಿತವಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನೋಂದಣಿ ವೇಳೆ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ವಿವರಗಳನ್ನು ದಾಖಲಿಸಿ ಇಷ್ಟದ ಕ್ಷೇತ್ರ ಹಾಗೂ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದು, ಶೈಕ್ಷಣಿಕ ಮೆರಿಟ್ ಹಾಗೂ ಕಂಪನಿಗಳ ಅವಶ್ಯಕತೆ ಆಧರಿಸಿ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ನೀಡಲಾಗುವ ಅನುಭವ ಪ್ರಮಾಣಪತ್ರವು ಖಾಸಗಿ ವಲಯದಲ್ಲಿ ಉತ್ತಮ ಉದ್ಯೋಗ ಪಡೆಯಲು ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.







