
ಹೊಸ ಉದ್ಯೋಗಕ್ಕೆ ಹೊರಟು ನಿಂತ ಹುಡುಗನಿಗೆ ಹಿರಿಯರೊಬ್ಬರು ಆ ಮಾತನ್ನು ಹೇಳುತ್ತಿದ್ದರು. ನೋಡಪ್ಪ ನೀನು ಕೆಲ್ಸ ಮಾಡೋ ಜಾಗದಲ್ಲಿ ನಂಬಿಕೆ ಗಳಿಸಿಕೋ… ಅಂತ. ನಂಗ್ಯಾಕೋ ಇದನ್ನ ಒಪ್ಪಿಕೊಳ್ಳಲು ಮನಸ್ಸಾಗುತ್ತಿಲ್ಲ. ಅಂದ್ರೆ, ಈ ನಂಬಿಕೆ ಗಳಿಸಿಕೋ ಅನ್ನೋ ಪದ ಪ್ರಯೋಗದ ಕುರಿತು ನನಗೆ ಸಮಾಧಾನವಿಲ್ಲ. ನನ್ನ ಪ್ರಕಾರ ನಂಬಿಕೆಯನ್ನು ಯಾರೋ ಗಳಿಸಿಕೊಳ್ಳಲು ಇನ್ನಾರೋ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದು ತನ್ನಷ್ಟಕ್ಕೆ ತಾನೇ ಮೊಳಕೆಯೊಡೆಯಬೇಕು, ಚಿಗುರಬೇಕು ಮತ್ತು ಹೆಮ್ಮರವಾಗಬೇಕು. ಇಂದಿನ ವ್ಯವಹಾರಿಕ ಪ್ರಪಂಚದಲ್ಲಿ ನಂಬಿಕೆಯ ಪಾತ್ರ ಬಹಳ ದೊಡ್ಡದು. ಅದರಲ್ಲೂ ಪತ್ರಿಕೋದ್ಯಮ, ಭೂಗತ ಲೋಕ, ಪೊಲೀಸ್ ಇಲಾಖೆ, ರಾಜಕೀಯ ಕ್ಷೇತ್ರಗಳಲ್ಲಿ ನಂಬಿಕೆ ಎಂಬುದು ದುಬಾರಿಯ ಸಂಗತಿ. ಇಂತಹ ಕ್ಷೇತ್ರಗಳಲ್ಲಿ ಸಾವಿರಾರು ಅನುಮಾನ, ಸಂಶಯಗಳ ನಡುವೆ ಒಂದು ನಂಬಿಕೆ ಹುಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಆದರೂ ಕೂಡ ಇಲ್ಲೊಬ್ಬ ನಂಬಿಕಸ್ಥನಿರುತ್ತಾನೆ! ಅಂತಹ ನಂಬಿಕಸ್ಥ ಭಂಟ ತನ್ನನ್ನು ನಂಬಿ ಅಂತ ವಿನಂತಿಸಿ ಕೊಂಡಿರುವುದಿಲ್ಲ. ಅಥವಾ ಆತನಿಗೆ ಯಾರೂ ಕೂಡ ನಿನ್ನನ್ನ ನಂಬ್ತೀನಿ ಅಂತ ಭರವಸೆ ಕೊಟ್ಟಿರುವುದಿಲ್ಲ. ಆದರೂ ಆತ ನಂಬಿಕಸ್ಥನಾಗಿರುತ್ತಾನೆ. ಅಂದರೆ ಯಾರ ಅಪ್ಪಣೆಗೂ ಕಾಯದೆ ಅಲ್ಲಿ ನಂಬಿಕೆ ಎಂಬುದು ಅವರಿಬ್ಬರ ನಡುವೆ ಹುಟ್ಟಿಕೊಂಡಿರುತ್ತದೆ ಮತ್ತು ಅವುಗಳ ಆಯಸ್ಸು ದೀರ್ಘವಾಗಿರುತ್ತದೆ. ಅಂದರೆ ಅಂತಹ ನಂಬಿಕೆಗಳು ಗಟ್ಟಿಯಾಗಿರುತ್ತವೆ ಅಂತ. ಎಸ್! ಈ ಜಗತ್ತು ನಿಂತಿರುವುದೇ ನಂಬಿಕೆಯ ತಳಪಾಯದ ಮೇಲೆ. ನಾಳೆಯ ಸೂರ್ಯೋದಯದ ನಂಬಿಕೆಯೊಂದಿಗೆ ನಾವು ರಾತ್ರಿ ಹಾಯಾಗಿ ನಿದ್ರಿಸುತ್ತೇವೆ. ಹಾಗಿದ್ದರೂ ಕೂಡ ನಿಮಗೆ ಹೆಜ್ಜೆಗೊಬ್ಬರಂತೆ ನಂಬಿ ಮೋಸ ಹೋದವರು, ನಂಬಿ ನೊಂದವರು ಸಿಗುತ್ತಾರೆ. ಇನ್ನೂ ಕೊಂಚ ಗಮನಿಸಿ ನೋಡಿದರೆ ನಂಬಿಕೆ ದ್ರೋಹಿಗಳು ಕಾಣಿಸಿಕೊಂಡು ಬಿಡುತ್ತಾರೆ! ಹಾಗಾದರೆ ನಂಬಿಕೆಯನ್ನು ಕಂಡು ಹಿಡಿಯುವುದಾದರು ಹೇಗೆ? ನಂಬಿ ಮೋಸ ಹೋಗದಿರಲು ಏನು ಮಾಡಬೇಕು ಎಂಬುದು ಪ್ರಶ್ನೆ. ನಮ್ಮಲ್ಲಿ ತುಂಬಾ ಜನರಿಗೆ ನಂಬಿಕೆ ಹಾಗೂ ಭರವಸೆಗಳ ನಡುವಿನ ವ್ಯತ್ಯಾಸವೇ ಗೊತ್ತಿರುವುದಿಲ್ಲ. ಎರಡೂ ಒಂದೇ ಅಂದುಕೊಂಡು ಬಿಟ್ಟಿರುತ್ತಾರೆ. ನಿಮಗೊಂದು ಉದಾಹರಣೆ ಹೇಳುತ್ತೇನೆ. ಹೈವೇಯಲ್ಲಿ ವೇಗವಾಗಿ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ಕಾರೊಂದನ್ನು ಮುನ್ನುಗಿಸಲು ಪ್ರಯತ್ನಿಸಿದ ಚಾಲಕನಿಗೆ ಎದುರಿನಲ್ಲಿ ಬರುತ್ತಿರುವ ವಾಹನ ಕಾಣಿಸುತ್ತದೆ. ಆದರೂ ಆತ ಲಾರಿಯನ್ನು ಓವರ್ ಟೇಕ್ ಮಾಡಿ ಬಿಡುತ್ತಾನೆ. ಇಲ್ಲಿ ಆ ಚಾಲಕನ ಭರವಸೆ ಅಂದರೆ ಕಾನ್ಫಿಡೆನ್ಸ್ ಕೆಲಸ ಮಾಡಿರುತ್ತದೆಯೇ ಹೊರತು ನಂಬಿಕೆಯಲ್ಲ. ಆದರೆ ನೆನಪಿರಲಿ. ಆ ಚಾಲಕನಿಗೆ ತನ್ನ ಬಗ್ಗೆ ಭರವಸೆ ಇರುವುದರ ಜೊತೆಗೆ ತನ್ನ ಕಾರಿನ ಬಗ್ಗೆ ನಂಬಿಕೆ ಇರುತ್ತದೆ! ಸರಿ ಇಷ್ಟಕ್ಕು ನಂಬಿಕೆ ದ್ರೋಹಗಳು ಹೇಗಾಗುತ್ತವೆ ಅಂತ ಕೇಳಿದರೆ, ನಂಬಿಕೆಯ ಜೊತೆ ನಿರೀಕ್ಷೆಗಳು ಸೇರಿಕೊಂಡಾಗ ನಂಬಿಕೆ ದ್ರೋಹಗಳಾಗುತ್ತವೆ. ನನ್ನ ಮಗಳು ನಂಗೆ ಮೋಸ ಮಾಡಲಿಕ್ಕಿಲ್ಲ. ನಾನು ಹೇಳಿದಂತೆ, ನನ್ನಾಸೆಯಂತೆ ಬದುಕುತ್ತಾಳೆ ಅಂತ ನಂಬಿದ್ದ ತಂದೆಗೆ, ಮಗಳು ಯಾರನ್ನೋ ಪ್ರೀತಿಸುತ್ತಿದ್ದಾಳೆ ಅಂತ ಗೊತ್ತಾದಾಗ ಅವಳು ದ್ರೋಹಿ ಅನಿಸಿಕೊಳ್ಳುತ್ತಾಳೆ. ಇಲ್ಲಿ ಮಗಳ ಮೇಲಿದ್ದ ನಂಬಿಕೆಗಿಂತ ನಿರೀಕ್ಷೆಗೆ ಪೆಟ್ಟು ಬಿದ್ದಿರುತ್ತದೆ. ಪ್ರತಿ ನಂಬಿಕೆ ದ್ರೋಹದ ಹಿಂದೆಯೂ ಒಂದು ಭಾವನಾತ್ಮಕವಾದ ಮೂರ್ಖ ನಿರ್ಧಾರವಿರುತ್ತದೆ! ಒಂದು ಕಂಪನಿ ಒಬ್ಬ ಉತ್ತಮ ಕೆಲಸಗಾರನನ್ನು ಆಯ್ದುಕೊಳ್ಳುವಾಗ ಇವ ಒಳ್ಳೆಯ ಕೆಲಸಗಾರ, ಈತನಿಂದ ಕಂಪನಿಗೆ ಒಂದಿಷ್ಟು ಲಾಭವಾಗಬಹುದು ಎಂಬ ಭರವಸೆಯೊಂದಿಗೆ ತೆಗೆದುಕೊಳ್ಳುತ್ತದೆ. ಆದರೆ ಆತನೇ ಕಂಪನಿಯನ್ನು ಉದ್ಧರಿಸಬಲ್ಲ ಎಂಬ ನಂಬಿಕೆಯೊಂದಿಗೆ ಮೈಮರೆತರೆ ಆತನೊಬ್ಬ ನಂಬಿಕೆ ದ್ರೋಹಿಯಾಗಿ ಕಾಣಿಸಿಕೊಳ್ಳುವ ದಿನ ದೂರವಿರುವುದಿಲ್ಲ. ಈಗ ಹೇಳಿ.. ನಿಂಗೆ ನನ್ನ ಮೇಲೆ ನಂಬಿಕೆ ಇಲ್ವಾ?, ನನ್ನ ನಂಬು ಪ್ಲೀಸ್, ನಿಮ್ಮ ನಂಬಿಕೇನಾ ಉಳಿಸಿಕೊಳ್ಳುತ್ತೇನೆ, ನಿನ್ನನ್ನೇ ನಂಬಿದೀನಿ ಅನ್ನೋ ಮಾತುಗಳಿಗೆ ಅರ್ಥವಿದೆಯಾ? ಇದು ನಂಬಿಕೆ ಅನ್ನೋ ದುಬಾರಿ ಸಂಗತಿಯ ಕರಾಮತ್ತು. ನಂಬಿಕೆ ಪ್ರಶ್ನೆ ಬಂದಾಗ ಒಮ್ಮೆ ಯೋಚಿಸಿ ನೋಡಿ ನಾನು ಹೇಳಿದ್ದನ್ನು ನಂಬಬಹುದೋ ಇಲ್ಲವಾ ಅಂತ ನಂಗೆ ಹೇಳಿ.







