
ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿ ಸಂಬಂಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ರೈತರ ಬಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಆಗಮಿಸಿ ಅಹವಾಲು ಸ್ವೀಕರಿಸಿದರು. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದ ಜೆ.ಸಿ.ಐ. ಸರ್ಕಲ್ನಲ್ಲಿ ರೈತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಬೆಳಗ್ಗೆಯಿಂದಲೇ ಸಿಎಂ ಡಿಕೆಶಿ ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದ ರೈತರು, ‘ಬೇಕೇ ಬೇಕು ನ್ಯಾಯ ಬೇಕು’ ಎಂದು ಘೋಷಣೆ ಕೂಗಿದ್ದರು. ಕಸ್ತೂರಿ ರಂಗನ್ ವರದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಚಿಕ್ಕಮಗಳೂರು–ಶೃಂಗೇರಿ ರಾಜ್ಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿದ್ದರು. ಸುಮಾರು ನಾಲ್ಕು ಸಾವಿರ ರೈತರು ಬೆಳಗ್ಗೆಯಿಂದ 12 ಕಿ.ಮೀ. ಪಾದಯಾತ್ರೆ ನಡೆಸಿ ಬಾಳೆಹೊನ್ನೂರಿಗೆ ಆಗಮಿಸಿದ್ದು, ಬಳಿಕ ಸಿಎಂ ಡಿಕೆಶಿಗಾಗಿ ಕಾದು ಕುಳಿತಿದ್ದರು. ರಂಭಾಪುರಿ ಮಠಕ್ಕೆ ಭೇಟಿ ಬಳಿಕ ಊಟಕ್ಕೆ ತೆರಳಿದ್ದ ಡಿ.ಕೆ. ಶಿವಕುಮಾರ್, ಬಳಿಕ ರೈತರ ಬಳಿಗೆ ಆಗಮಿಸಿ ಅವರ ಮನವಿಯನ್ನು ಸ್ವೀಕರಿಸಿದರು. ಡಿಕೆಶಿ ಬರುವವರೆಗೂ ಹೆದ್ದಾರಿ ಬಂದ್ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದ ರೈತರು, ಇದೀಗ ಸಿಎಂ ಎದುರು ತಮ್ಮ ಬೇಡಿಕೆಗಳನ್ನು ಮಂಡಿಸಿದ್ದಾರೆ.




