
ಚಿಕ್ಕಮಗಳೂರು: ಮುಖ್ಯಮಂತ್ರಿ ಆದ ಬಳಿಕ ಇದೇ ಮೊದಲ ಬಾರಿಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡುತ್ತಿದ್ದು, ಅವರ ಆಗಮನಕ್ಕೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಬಾಳೆಹೊನ್ನೂರು ಶಾಖಾ ಮಠದಲ್ಲಿ ಡಿ.ಕೆ. ಶಿವಕುಮಾರ್ ಅವರು ಜಗದ್ಗುರುಗಳ ಭೇಟಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದ್ದು, ಶಾಖಾ ಮಠದ ಸ್ವಾಮೀಜಿಗಳೂ ಆಗಮಿಸಿದ್ದಾರೆ. ಸಮಾವೇಶದ ವೇದಿಕೆ ಮುಂಭಾಗದಲ್ಲಿ ಈಗಾಗಲೇ ಸಾವಿರಾರು ಸಾರ್ವಜನಿಕರು ಆಸೀನರಾಗಿದ್ದು, ಮೂರು ಸಾವಿರಕ್ಕೂ ಅಧಿಕ ಸ್ಥಳೀಯರು ಹಾಗೂ ರೈತರು ಭಾಗವಹಿಸುವ ನಿರೀಕ್ಷೆಯಿದೆ. ಪ್ರಮುಖವಾಗಿ ಚಿಕ್ಕಮಗಳೂರು ಜಿಲ್ಲೆಯ 137 ಹಳ್ಳಿಗಳಿಗೆ ಆವರಿಸಿರುವ ಕಸ್ತೂರಿ ರಂಗನ್ ವರದಿ ಕುರಿತು ರೈತರಿಂದ ಡಿ.ಕೆ. ಶಿವಕುಮಾರ್ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡಿನ ಜನಜೀವನ ಹಾಗೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿ ಕಳೆದೊಂದು ತಿಂಗಳಿಂದ ರೈತರು ಹಾಗೂ ಸಾರ್ವಜನಿಕರು ಪ್ರತಿಭಟನೆ, ಬಂದ್ ಸೇರಿದಂತೆ ವಿವಿಧ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದೀಗ ಡಿಸಿಎಂ ಭೇಟಿ ಸಂದರ್ಭದಲ್ಲಿ ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ನೇರವಾಗಿ ಸರ್ಕಾರದ ಗಮನಕ್ಕೆ ತರಲು ರೈತರು ಸಜ್ಜಾಗಿದ್ದಾರೆ.




