
ಕೊಟ್ಟಿಗೆಹಾರ: ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಜಯದ ರೂವಾರಿಗಳಲ್ಲಿ ಪ್ರಮುಖ ಪಾತ್ರವಹಿಸಿದ ಅರುಣ್ ಬಿನ್ನಡಿಗೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಆತ್ಮೀಯವಾಗಿ ಸನ್ಮಾನ ಸಲ್ಲಿಸಿದರು. ದೇಶಸೇವೆಯ ಉದ್ದೇಶದಿಂದ ಉತ್ತಮ ಸಂಬಳದ ಉದ್ಯೋಗಕ್ಕೆ ರಾಜೀನಾಮೆ ನೀಡಿ ಸಂಘಟನಾ ಕಾರ್ಯದಲ್ಲಿ ತೊಡಗಿಕೊಂಡ ಅರುಣ್, ತಮ್ಮ ಮೇಲೆ ಬಂದ ಪ್ರತಿಯೊಂದು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸಿದ್ದ ವ್ಯಕ್ತಿಯಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಅತಿಹೆಚ್ಚು ಮತಗಳಿಂದ ಆಯ್ಕೆಯಾಗುವಲ್ಲಿ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲ್ಬುರ್ಗಿಯಲ್ಲಿ ಖರ್ಗೆ ಕುಟುಂಬಕ್ಕೆ ಸವಾಲು ಎಸೆದ ರಾಜಕೀಯ ತಂತ್ರಗಳಲ್ಲಿ ಅವರ ಪಾತ್ರ ಗಮನಾರ್ಹವಾಗಿತ್ತು. ತಾವು ನಂಬಿದ ಸಿದ್ಧಾಂತಕ್ಕೆ ಬದ್ಧವಾಗಿ ಕೆಲಸ ಮಾಡುವ ಅರುಣ್, ಬಂಗಾಳ ಚುನಾವಣಾ ರಾಜಕೀಯದಲ್ಲಿಯೂ ಹೊಸದೇನಲ್ಲದೆ, 2019ರ ಲೋಕಸಭಾ ಚುನಾವಣೆಯ ವೇಳೆ ಕೋಲ್ಕತ್ತಾದಲ್ಲಿ ಅಮಿತ್ ಶಾ ರೋಡ್ ಶೋ ಸಂದರ್ಭದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿಯೂ ಸಕ್ರಿಯವಾಗಿ ಇದ್ದರು. ಬಳಿಕ ರಾಜ್ಯದಲ್ಲಿ ಕೆಲವರ ಸ್ವಾರ್ಥಪರ ನಡೆಗಳಿಂದ ಸಂಘಟನಾ ಕಾರ್ಯದರ್ಶಿ ಹುದ್ದೆ ರದ್ದಾದ ಹಿನ್ನೆಲೆಯಲ್ಲಿ ಊರಿಗೆ ಮರಳಿ ಕೃಷಿಯಲ್ಲಿ ತೊಡಗಿಕೊಂಡಿದ್ದ ಅವರು, ನಂತರ ಮತ್ತೆ ಸಂಘಟನೆಯ ಜವಾಬ್ದಾರಿಯನ್ನು ಹೊತ್ತು ಉತ್ತರ ವಲಯದ ಸಿಲಿಗುರಿ ವಿಭಾಗದ ಸಂಘಟನಾ ಪ್ರಭಾರಿಯಾಗಿ ಬಂಗಾಳದಲ್ಲಿ ಕಾರ್ಯನಿರ್ವಹಿಸಿ ಗೆಲುವಿನ ತಂತ್ರಗಳನ್ನು ರೂಪಿಸಿ ಯಶಸ್ಸು ಸಾಧಿಸಿದ್ದಾರೆ. ಕರ್ನಾಟಕದ ಯುವಕರಿಗೂ ಇದೊಂದು ಮಾದರಿಯಾಗಿದ್ದು, ರಾಜ್ಯದಲ್ಲಿಯೂ ಇಂತಹ ಸಮರ್ಥ ಕಾರ್ಯಕರ್ತರಿಗೆ ಅವಕಾಶ ನೀಡಿದರೆ ಯಶಸ್ಸು ಸಾಧ್ಯವೆಂಬ ಮಾತು ಕೇಳಿಬರುತ್ತಿದೆ.




