
ಮೂಡಿಗೆರೆ: ಬೀಗ ಹಾಕಿದ್ದ ಮನೆಯೊಂದರ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ನಗದು ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡಿನ ಮಂಡಿ ಮನೆ ನಿವಾಸಿ ಲಕ್ಷ್ಮಣೇಗೌಡ ಅವರ ಮನೆಯಲ್ಲಿ ನಡೆದಿದೆ. ಲಕ್ಷ್ಮಣೇಗೌಡ ಅವರು ತಮ್ಮ ಪತ್ನಿ ರಾಧಾ ಅವರೊಂದಿಗೆ ಮಧ್ಯಾಹ್ನ ಸಕಲೇಶಪುರದಲ್ಲಿರುವ ಮಗಳ ಮನೆಗೆ ತೆರಳಿದ್ದು, ಬೆಳಿಗ್ಗೆ ಮನೆಗೆ ಮರಳಿದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಖದೀಮರು ಮನೆಯ ಮುಂಬಾಗಿಲನ್ನು ಮುರಿದು ಒಳನುಗ್ಗಿದ್ದಲ್ಲದೆ, ಸಿಕ್ಕಿಬೀಳುವ ಭಯದಿಂದ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದಾರೆ. ಬಳಿಕ ಮನೆಯ ರೂಮಿನಲ್ಲಿದ್ದ 10 ಸಾವಿರ ರೂಪಾಯಿ ನಗದು ಹಣ, 25 ಸಾವಿರ ರೂಪಾಯಿ ಮೌಲ್ಯದ ಎರಡು ಕೈಗಡಿಯಾರಗಳು ಹಾಗೂ 10 ಸಾವಿರ ರೂಪಾಯಿ ಬೆಲೆಯ ಒಂದು ಆಂಪ್ಲಿಫೈಯರ್ ಸೇರಿದಂತೆ ಒಟ್ಟು 45 ಸಾವಿರ ರೂಪಾಯಿ ಮೌಲ್ಯದ ಸ್ವತ್ತನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಇಷ್ಟೇ ಅಲ್ಲದೆ ಮನೆಯಲ್ಲಿದ್ದ ಎರಡು ಸ್ಪೀಕರ್ಗಳು ಹಾಗೂ ಜನರೇಟರ್ನನ್ನೂ ಕಳ್ಳತನ ಮಾಡಲು ಯತ್ನಿಸಿದ್ದು, ಅವುಗಳನ್ನು ಮನೆಯ ಹೊರಭಾಗಕ್ಕೆ ತಂದು ಇಟ್ಟಿರುವುದು ಕಂಡುಬಂದಿದೆ. ಆದರೆ ಯಾವುದೋ ಕಾರಣಕ್ಕೆ ಅವುಗಳನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಕ್ಷ್ಮಣೇಗೌಡ ಅವರು ನೀಡಿದ ದೂರಿನ ಮೇರೆಗೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.




