
ಚಿಕ್ಕಮಗಳೂರು: ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಹೈಕೋರ್ಟ್ ಆದೇಶದಿಂದ ಬಿಗ್ ಶಾಕ್ ಎದುರಾಗಿದ್ದು, ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ವಿವಾದ ಇದೀಗ ಮರು ಎಣಿಕೆಯ ಹಂತಕ್ಕೆ ತಲುಪಿದೆ. ಮಾಜಿ ಶಾಸಕ ಡಿ.ಎನ್. ಜೀವರಾಜ್ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ ಅಂಚೆ ಮತಗಳ ಎಣಿಕೆಯಲ್ಲಿ ಅಸಂಗತತೆಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮರು ಎಣಿಕೆ ನಡೆಸುವಂತೆ ಸೂಚಿಸಿದ್ದು, ಮೇ 2ರಂದು ಚಿಕ್ಕಮಗಳೂರು ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಬೆಳಗ್ಗೆ 9 ಗಂಟೆಯಿಂದ ಈ ಪ್ರಕ್ರಿಯೆ ಆರಂಭವಾಗಲಿದೆ. ಈಗಾಗಲೇ ಏಪ್ರಿಲ್ 6ರಂದು ಹೈಕೋರ್ಟ್ ಈ ಆದೇಶ ನೀಡಿದ್ದರೂ, ಎರಡು ವಾರಗಳ ಮಧ್ಯಂತರ ತಡೆ ನೀಡಲಾಗಿತ್ತು ಮತ್ತು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿತ್ತು, ಆದರೆ ಮೇಲ್ಮನವಿ ಸಲ್ಲಿಸದ ಕಾರಣ ಈಗ ಮರು ಎಣಿಕೆ ಕಡ್ಡಾಯವಾಗಿದೆ. ಶೃಂಗೇರಿ ಕ್ಷೇತ್ರದಲ್ಲಿ ಒಟ್ಟು 1822 ಅಂಚೆ ಮತಗಳು ಚಲಾವಣೆಯಾಗಿದ್ದು, ಅವುಗಳಲ್ಲಿ 279 ಮತಗಳನ್ನು ತಿರಸ್ಕರಿಸಿದ್ದೇ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಅವುಗಳ ಮರು ಪರಿಶೀಲನೆ ನಡೆಯಲಿದೆ. ಕೇವಲ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಟಿ.ಡಿ. ರಾಜೇಗೌಡ ಅವರ ಗೆಲುವಿನ ಮೇಲೆ ಈ ಮರು ಎಣಿಕೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಕ್ಷೇತ್ರದ ರಾಜಕೀಯ ಸಮೀಕರಣದಲ್ಲೂ ಬದಲಾವಣೆ ಸಾಧ್ಯತೆ ಬಗ್ಗೆ ಕುತೂಹಲ ಹೆಚ್ಚಾಗಿದೆ. ಹೈಕೋರ್ಟ್ ಆದೇಶದ ಮೇರೆಗೆ ಚುನಾವಣಾ ಆಯೋಗ ಸಂಪೂರ್ಣ ಸಿದ್ಧತೆ ನಡೆಸಿದ್ದು, ಅಧಿಕಾರಿಗಳು, ಪ್ರತಿನಿಧಿಗಳು ಮತ್ತು ವೀಕ್ಷಕರ ಸಮ್ಮುಖದಲ್ಲಿ ಪಾರದರ್ಶಕವಾಗಿ ಮರು ಎಣಿಕೆ ನಡೆಯಲಿದ್ದು, ಈ ಪ್ರಕ್ರಿಯೆ ರಾಜ್ಯದಷ್ಟೇ ಅಲ್ಲದೆ ಹೊರರಾಜ್ಯಗಳಲ್ಲೂ ಕುತೂಹಲ ಮೂಡಿದೆ.




