
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಡಿ.ಕೆ. ಶಿವಕುಮಾರ್ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು, ಇಂದು (ಜೂನ್ 4) ವಿಧಾನಸೌಧದಲ್ಲಿ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ಸಭೆ ನಡೆಸಿ ತಮ್ಮ ಆಡಳಿತದ ನೀತಿ ಮತ್ತು ಕಾರ್ಯವೈಖರಿಯನ್ನು ಅಧಿಕಾರಿಗಳ ಮುಂದೆ ವಿವರಿಸಿದರು. ಯಾವುದೇ ಒತ್ತಡಕ್ಕೆ ಮಣಿಯದೆ ಜನಪರವಾಗಿ ಹಾಗೂ ಪಾರದರ್ಶಕವಾಗಿ ಕೆಲಸ ಮಾಡುವಂತೆ ಸೂಚಿಸಿದ ಅವರು, ಸರ್ಕಾರದಲ್ಲಿ ಜಾತಿ, ಧರ್ಮ ಅಥವಾ ಯಾವುದೇ ರೀತಿಯ ಪ್ರಭಾವಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು. ಎಲ್ಲಾ ಇಲಾಖೆಗಳ ಬಾಕಿ ಕೆಲಸಗಳ ಪಟ್ಟಿಯನ್ನು 25 ದಿನಗಳೊಳಗೆ ಸಲ್ಲಿಸುವಂತೆ ನಿರ್ದೇಶನ ನೀಡಿದ ಸಿಎಂ, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ತಿಳಿಸಿದರು. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು, ಭ್ರಷ್ಟಾಚಾರ ಮುಕ್ತ ಆಡಳಿತವೇ ಸರ್ಕಾರದ ಗುರಿಯಾಗಿದ್ದು, ಮಂತ್ರಿಗಳು ಹಾಗೂ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು. ನಿನ್ನೆ ಘೋಷಿಸಲಾದ ಆರು ಕಲ್ಯಾಣ ಯೋಜನೆಗಳನ್ನು ತಕ್ಷಣ ಜಾರಿಗೆ ತರಲು ಸೂಚಿಸಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡಲು, ರೌಡಿಸಂ, ಡ್ರಗ್ಸ್ ಹಾಗೂ ಜೂಜಾಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಆದೇಶಿಸಿದರು. ಎಲ್ಲಾ ಇಲಾಖೆಗಳು 15 ದಿನಗಳೊಳಗೆ ಆ್ಯಕ್ಷನ್ ಪ್ಲ್ಯಾನ್ ಸಿದ್ಧಪಡಿಸಿ ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಬೇಕು ಎಂದು ಸೂಚಿಸಿದ ಡಿಕೆ ಶಿವಕುಮಾರ್, “ನನಗೆ ಇತಿಹಾಸ ಓದುವುದು ಅಥವಾ ಬರೆಯುವುದು ಇಷ್ಟವಿಲ್ಲ, ಇತಿಹಾಸ ನಿರ್ಮಾಣ ಮಾಡಬೇಕು” ಎಂದು ಅಧಿಕಾರಿಗಳಿಗೆ ಸಂದೇಶ ನೀಡಿದರು.




