
ಕಾರ್ಕಳ: ಮಣಿಪಾಲ ಆರೋಗ್ಯ ಕಾರ್ಡ್ 2026ರ ನೋಂದಣಿಗೆ ಆಗಸ್ಟ್ 31, 2026 ಕೊನೆಯ ದಿನವಾಗಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮೋಹನ್ ಶೆಟ್ಟಿ ಮನವಿ ಮಾಡಿದ್ದಾರೆ. ಕಾರ್ಕಳ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 26 ವರ್ಷಗಳಿಂದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ಜನರಿಗೆ ಆರೋಗ್ಯ ಸೇವೆಯಲ್ಲಿ ಹಲವು ಪ್ರಯೋಜನಗಳನ್ನು ಒದಗಿಸುತ್ತಿದೆ. ಪ್ರಸ್ತುತ ಸುಮಾರು 6.5 ಲಕ್ಷ ಸದಸ್ಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ‘ಸಂಪೂರ್ಣ ಕುಟುಂಬಕ್ಕಾಗಿ, ಶ್ರೇಷ್ಠ ಮೌಲ್ಯ, ವಿಶ್ವಾಸಾರ್ಹ ಸೇವೆ’ ಎಂಬ ಘೋಷವಾಕ್ಯದೊಂದಿಗೆ ಮಾಹೆ ಸಮೂಹ ಆಸ್ಪತ್ರೆಗಳಲ್ಲಿ ಕಾರ್ಡ್ ಹೊಂದಿರುವವರಿಗೆ ವಿವಿಧ ಆರೋಗ್ಯ ಸೇವೆಗಳಲ್ಲಿ ರಿಯಾಯಿತಿಗಳು ಲಭ್ಯವಿವೆ. ನೋಂದಣಿಯ ನಂತರ ತಿಂಗಳ 15ನೇ ತಾರೀಖಿನಿಂದ ಕಾರ್ಡ್ನ ಪ್ರಯೋಜನಗಳು ಜಾರಿಗೆ ಬರಲಿದ್ದು, 2027ರ ಆಗಸ್ಟ್ 15ರವರೆಗೆ ಮಾನ್ಯವಾಗಿರಲಿದೆ. ಮಣಿಪಾಲ ಆರೋಗ್ಯ ಕಾರ್ಡ್ನ ವೈಯಕ್ತಿಕ ಸದಸ್ಯತ್ವಕ್ಕೆ 350 ರೂಪಾಯಿ, ಕೌಟುಂಬಿಕ ಸದಸ್ಯತ್ವಕ್ಕೆ 700 ರೂಪಾಯಿ ಹಾಗೂ ಕೌಟುಂಬಿಕ ಪ್ಲಸ್ ಸದಸ್ಯತ್ವಕ್ಕೆ 900 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ತಜ್ಞರ ಸಮಾಲೋಚನಾ ಶುಲ್ಕದಲ್ಲಿ ಶೇ.50, ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇ.25 ಹಾಗೂ ರೇಡಿಯಾಲಜಿ ಸೇವೆಗಳಲ್ಲಿ ಶೇ.20ರಷ್ಟು ರಿಯಾಯಿತಿ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳಲ್ಲಿ ವಿಶೇಷ ಪ್ರಯೋಜನಗಳು ದೊರೆಯಲಿವೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ, ಮಂಗಳೂರು ಮತ್ತು ಅತ್ತಾವರದ ಕೆಎಂಸಿ ಆಸ್ಪತ್ರೆಗಳು, ಕಟೀಲಿನ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಹಾಗೂ ಮಣಿಪಾಲ ದಂತ ಮತ್ತು ಆಯುರ್ವೇದ ಆಸ್ಪತ್ರೆಗಳಲ್ಲಿ ಕಾರ್ಡ್ನ ಪ್ರಯೋಜನ ಪಡೆಯಬಹುದು ಎಂದು ಮೋಹನ್ ಶೆಟ್ಟಿ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರ್ಕೆಟಿಂಗ್ ವಿಭಾಗದ ಸಚಿನ್ ಕಾರಂತ್, ಕಾರ್ಕಳ ಟಿಎಂಎ ಪೈ ಆಸ್ಪತ್ರೆಯ ಮ್ಯಾನೇಜರ್ ನಟೇಶ್, ಮಾರ್ಕೆಟಿಂಗ್ ವಿಭಾಗದ ಆಶ್ಲೋನ್, ಅನಿಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಅರುಣ್ ಭಟ್ ಕಾರ್ಕಳ




