
ಕಡೂರು: ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ನಾಲ್ವರನ್ನು ಯಗಟಿ ಪೊಲೀಸರು ಬಂಧಿಸಿ, ₹35,590 ನಗದು ಸೇರಿದಂತೆ ಜೂಜಾಟಕ್ಕೆ ಬಳಸಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಆಗಸ್ಟ್ 24ರಂದು ರಾತ್ರಿ ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಪುರ ಗ್ರಾಮದ ಶಿವಗನಾಯ್ಕ ಅವರ ತೋಟದಲ್ಲಿ ಕೆಲವರು ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಯಗಟಿ ಠಾಣೆಯ ಪಿಎಸ್ಐ ಶಾಹಿದ್ ಅಫ್ರಿದಿ ಅವರ ನೇತೃತ್ವದಲ್ಲಿ ಸಿಬ್ಬಂದಿಯೊಂದಿಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸೀತಾಪುರ ಗ್ರಾಮದ ತೋಟದಲ್ಲಿ ಮರೆಯಲ್ಲಿ ನಿಂತು ಪರಿಶೀಲಿಸಿದಾಗ ನಾಲ್ವರು ವ್ಯಕ್ತಿಗಳು ಟಾರ್ಪಲ್ ಮೇಲೆ ಕುಳಿತು ಹಣವನ್ನು ಪಣಕ್ಕಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವುದು ಕಂಡುಬಂದಿದೆ. ಕೂಡಲೇ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರನ್ನು ಸೀತಾಪುರ ಗ್ರಾಮದ ಮಹಲಿಂಗನಾಯ್ಕ, ಪ್ರದೀಪ, ಮುಗುಳಿಕಟ್ಟೆ ಗ್ರಾಮದ ರಂಗಪ್ಪ ಹಾಗೂ ಸೀತಾಪುರ ಗ್ರಾಮದ ಚಂದನ್ ಎಂದು ಗುರುತಿಸಲಾಗಿದೆ. ಪೊಲೀಸರ ಪರಿಶೀಲನೆ ವೇಳೆ ಸ್ಥಳದಿಂದ ₹35,590 ನಗದು, 52 ಇಸ್ಪೀಟ್ ಎಲೆಗಳು, ಒಂದು ಟಾರ್ಚ್ ಹಾಗೂ ಕಪ್ಪು ಬಣ್ಣದ ಪ್ಲಾಸ್ಟಿಕ್ ಟಾರ್ಪಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಯಾವುದೇ ಪರವಾನಗಿ ಇಲ್ಲದೆ ಹಣವನ್ನು ಪಣಕ್ಕಿಟ್ಟು ಜೂಜಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಯಗಟಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.




