
ಮೂಡಿಗೆರೆ: ಸೆಪ್ಟೆಂಬರ್ 8ರಂದು ನಡೆಯುವ ಮಾತೆ ಮರಿಯಮ್ಮನವರ ಜನ್ಮದಿನದ ಹಬ್ಬ ಹಾಗೂ ಹೊಸಕ್ಕಿ ಹಬ್ಬದ ಪ್ರಯುಕ್ತ ರಾಜ್ಯ ಸರ್ಕಾರ ಒಂದು ದಿನದ ಸಾರ್ವತ್ರಿಕ ಅಥವಾ ಸ್ಥಳೀಯ ರಜೆ ಘೋಷಿಸಬೇಕು ಎಂದು ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೊ ಒತ್ತಾಯಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ರೈಸ್ತ ಸಮುದಾಯದವರು ಹಿಂದಿನಿಂದಲೂ ರಾಜ್ಯದಾದ್ಯಂತ ಮಾತೆ ಮರಿಯಮ್ಮನವರ ಹಬ್ಬವನ್ನು ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕ್ರೈಸ್ತರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೊಸಕ್ಕಿ ಹಬ್ಬವನ್ನೂ ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಹಬ್ಬದ ಅಂಗವಾಗಿ ಒಂಬತ್ತು ದಿನಗಳ ಕಾಲ ಬಾಲಿಕಾ ಮರಿಯಮ್ಮನವರ ಪ್ರತಿಮೆಗೆ ಹೂ ಅರ್ಪಿಸಿ ನೋವೇನಾ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆದರೆ ಈ ಹಬ್ಬಕ್ಕೆ ಪ್ರಸ್ತುತ ಯಾವುದೇ ಸರ್ಕಾರಿ ಅಥವಾ ಸ್ಥಳೀಯ ರಜೆ ಇಲ್ಲ ಎಂದು ಅವರು ಹೇಳಿದ್ದಾರೆ. ವಿಶೇಷವಾಗಿ ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕ್ರೈಸ್ತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಅವರ ಭಾವನೆಗಳಿಗೆ ಸರ್ಕಾರ ಗೌರವ ನೀಡಬೇಕು. ಸೆಪ್ಟೆಂಬರ್ 8ರಂದು ರಾಜ್ಯದಾದ್ಯಂತ ಒಂದು ದಿನದ ಸಾರ್ವತ್ರಿಕ ಅಥವಾ ಸ್ಥಳೀಯ ರಜೆ ಘೋಷಿಸಿ, ಮಾತೆ ಮರಿಯಮ್ಮನವರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಅವಕಾಶ ಕಲ್ಪಿಸಬೇಕು ಎಂದು ಹರ್ಷ ಮೆಲ್ವಿನ್ ಲಸ್ರಾದೊ ಆಗ್ರಹಿಸಿದ್ದಾರೆ.
ವರದಿ: ಸಂತೋಷ್ ಅತ್ತಿಗೆರೆ




