
ಚಿಕ್ಕಮಗಳೂರು: ಕುಡಿದು ವಾಹನ ಚಲಾಯಿಸುತ್ತಿದ್ದ ಯುವಕನೊಬ್ಬ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿ, ಅವಾಜ್ ಹಾಕಿದ ಘಟನೆ ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ವೇಳೆ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದ್ದು, ಬಳಿಕ ಟಚ್ ಆದ ವಾಹನದ ಮಾಲೀಕರೊಂದಿಗೆ ಕೂಡ ಯುವಕ ಗಲಾಟೆಗೆ ಮುಂದಾಗಿದ್ದಾನೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಕಾರಿನ ಕೀ ತೆಗೆದುಕೊಳ್ಳಲು ಮುಂದಾದ ಪೊಲೀಸ್ ಸಿಬ್ಬಂದಿಗೆ ಯುವಕ ಅವಾಚ್ಯವಾಗಿ ಮಾತನಾಡಿ, ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅಲ್ಲದೇ ಪೊಲೀಸರೊಂದಿಗೆ ನೂಕಾಟ-ತಳ್ಳಾಟ ನಡೆಸಿ, ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಅವಮಾನ ಮಾಡುವ ರೀತಿಯಲ್ಲಿ ವರ್ತಿಸಿದ್ದಾನೆ. “ಪೊಲೀಸರಿಗೆ ನಾನು ಹೇಗೆ ಮಾತನಾಡುತ್ತೇನೆ ಗೊತ್ತಾ…” ಎಂದು ಪ್ರಶ್ನಿಸಿ, “ನನ್ನದ್ದೇನು ಕಿತ್ತುಕೊಳ್ಳೋಕೆ ಆಗಲ್ಲ” ಎಂಬ ರೀತಿಯಲ್ಲಿ ಅವಾಜ್ ಹಾಕಿದ್ದಾನೆ ಎನ್ನಲಾಗಿದೆ. ಯುವಕನ ವರ್ತನೆಯಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವರದಿ: ಸಂತೋಷ್ ಅತ್ತಿಗೆರೆ




