
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ. ಬಿಜೆಪಿ ಮುಖಂಡ ವಿಜಯ್ ಕುಮಾರ್ ನೇತೃತ್ವದಲ್ಲಿ ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕಿನ ಕೈ-ಕಮಲದ ಕಾರ್ಯಕರ್ತರು ಜೆಡಿಎಸ್ ಸೇರಲಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನ ಆಕಾಂಕ್ಷಿಯಾಗಿದ್ದ ವಿಜಯ್ ಕುಮಾರ್ ಅವರು ಇದೀಗ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಅವರ ನೇತೃತ್ವದಲ್ಲಿ 200ಕ್ಕೂ ಅಧಿಕ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಇನ್ನು ಕಟ್ಟರ್ ಹಿಂದೂವಾದಿ ಹಾಗೂ ಭಜರಂಗದಳದ ಮಾಜಿ ಜಿಲ್ಲಾ ಸಂಚಾಲಕ ತುಡುಕೂರು ಮಂಜು, ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮಂಜು ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್ ಸೇರಲಿದ್ದಾರೆ. ಬಿಜೆಪಿ ಯುವ ಮೋರ್ಚಾದ ಮಂಡಲ ಹಾಗೂ ವಿವಿಧ ಹಂತದ ಕಾರ್ಯಕರ್ತರೂ ಜೆಡಿಎಸ್ ಸೇರ್ಪಡೆಯಾಗಲಿದ್ದು, ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಭೋಜೇಗೌಡ ಅವರ ನೇತೃತ್ವದಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಿಂದ 500ಕ್ಕೂ ಅಧಿಕ ಕಾರ್ಯಕರ್ತರು ಬೆಂಗಳೂರಿಗೆ ತೆರಳಲಿದ್ದು, ಅವರ ಪೈಕಿ 200ಕ್ಕೂ ಅಧಿಕ ಮಂದಿ ಜೆಡಿಎಸ್ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದಾರೆ.
ವರದಿ: ಸಂತೋಷ್ ಅತ್ತಿಗೆರೆ




