
ಹನೂರು: ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯ ಟಿಬೇಟಿಯನ್ ಕ್ಯಾಂಪ್ ಪ್ರದೇಶಕ್ಕೆ ಬಿಆರ್ಟಿ ನಿರ್ದೇಶಕರು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಶ್ರೀ ಶ್ರೀಪತಿ ಬಿ ಎಸ್ ಬೈಲೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಗಳು ಪ್ರಮೋದ್ ಎ ಸಿಬ್ಬಂದಿಯೊಂದಿಗೆ ಹಾಗೂ ಹಾಗೂ ಟಿಬೆಟಿಯನ್ ಸೆಟಲ್ಮೆಂಟ್ ಆಧಿಕಾರಿ ಮತ್ತು ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಟಿಬೇಟಿಯನ್ ಗ್ರಾಮಗಳಾದ ಎ, ಬಿ, ಡಿ, ಎಲ್, ಐ ಹಾಗೂ ಓ ಗ್ರಾಮಗಳಿಗೆ ಭೇಟಿ ನೀಡಿ, ಆನೆ ದಾಳಿಯಿಂದ ಹಾನಿಗೊಳಗಾದ ಆಸ್ತಿಪಾಸ್ತಿಗಳು ಹಾಗೂ ಆನೆಗಳು ಸಂಚರಿಸುವ ಮತ್ತು ರಸ್ತೆ ದಾಟುವ ಸ್ಥಳಗಳನ್ನು ಸ್ಥಳ ಪರಿಶೀಲನೆ ಮಾಡಲಾಯಿತು.
ಪರಿಶೀಲನೆ ವೇಳೆ, ಆನೆಗಳು ದಾಟುವ ಸೂಕ್ಷ್ಮ ಪ್ರದೇಶಗಳಲ್ಲಿ ತುರ್ತು ತಡೆಗೋಡೆಗಳನ್ನು ನಿರ್ಮಿಸುವುದು ಹಾಗೂ ಹಾಳಾಗಿರುವ ಆನೆ ಕಂದಕಗಳನ್ನು ನಿರ್ವಹಣೆ ಮಾಡಲು ಕ್ರಮ ವಹಿಸುದಾಗಿ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದರು.
ನಂತರ ಟಿಬೇಟಿಯನ್ ಸಭಾಭವನದಲ್ಲಿ ಗ್ರಾಮಸ್ಥರ ಸಭೆ ನಡೆಸಲಾಯಿತು. ಸಭೆಯಲ್ಲಿ ಟಿಬೇಟಿಯನ್ ಗ್ರಾಮಗಳು ಹಾಗೂ ಒಡಯರಪಾಳ್ಯ ಗ್ರಾಮದ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಅಧಿಕಾರಿಗಳು, ಆನೆಗಳ ಸಂಚಾರವಿರುವ ಪ್ರದೇಶಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸುವಂತೆ ಹಾಗೂ ಸ್ಥಳೀಯ ಅರಣ್ಯ ಇಲಾಖೆಯೊಂದಿಗೆ ಸಹಕಾರ ನೀಡುವ ಮೂಲಕ ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ರೈತರು ಹಾಗೂ ಗ್ರಾಮಸ್ಥರಿಂದ ಮಾನವ-ವನ್ಯಜೀವಿ ಸಂಘರ್ಷಕ್ಕೆ ಸಂಬಂಧಿಸಿದ ಸಮಸ್ಯೆಗಳು, ಆನೆಗಳ ಸಂಚಾರ ಮಾರ್ಗಗಳು ಮತ್ತು ಬೆಳೆ ಹಾನಿ ಕುರಿತು ಮಾಹಿತಿ ಪಡೆಯಲಾಯಿತು. ಗ್ರಾಮಸ್ಥರ ಸಲಹೆ ಮತ್ತು ಮಾಹಿತಿಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.




