
ಬೆಂಗಳೂರು: 2025ರ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಕೇಂದ್ರ ಸರ್ಕಾರದ ನಗದು ಪುರಸ್ಕಾರ ಪಡೆದಿರುವ ರಾಜ್ಯದ ಆರು ಗ್ರಾಮ ಪಂಚಾಯತಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ದೇಶದ ಒಟ್ಟು 42 ಗ್ರಾಮ ಪಂಚಾಯತಿಗಳು ಪ್ರಶಸ್ತಿಗೆ ಭಾಜನವಾಗಿದ್ದು, ಅವುಗಳಲ್ಲಿ ಕರ್ನಾಟಕದ ಆರು ಪಂಚಾಯತಿಗಳು ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿಯ ಮುದ್ರಾಡಿ ಗ್ರಾಮ ಪಂಚಾಯತಿಗೆ ಬಡತನ ಮುಕ್ತ ಮತ್ತು ಸುಧಾರಿತ ಜೀವನೋಪಾಯ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಲಭಿಸಿ 1 ಕೋಟಿ ರೂ. ನಗದು ಬಹುಮಾನ ದೊರೆತಿದ್ದು, ಕುಂದಾಪುರದ ವಂಡ್ಸೆ ಗ್ರಾಮ ಪಂಚಾಯತಿಗೆ ಆರೋಗ್ಯಕರ ಪಂಚಾಯತ್ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿಯಾಗಿ 75 ಲಕ್ಷ ರೂ. ಬಹುಮಾನ ಲಭಿಸಿದೆ. ಬೆಂಗಳೂರು ನಗರ ಜಿಲ್ಲೆಯ ಹಾಲನಾಯಕನಹಳ್ಳಿ ಗ್ರಾಮ ಪಂಚಾಯತಿಗೆ ಮಕ್ಕಳ ಸ್ನೇಹಿ ಪಂಚಾಯತ್ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ದೊರೆತಿದ್ದು 75 ಲಕ್ಷ ರೂ. ನಗದು ಪುರಸ್ಕಾರ ಸಿಕ್ಕಿದೆ. ಉಡುಪಿ ಜಿಲ್ಲೆಯ ಹೆಬ್ರಿಯ ಮಡಮಕ್ಕಿ ಗ್ರಾಮ ಪಂಚಾಯತಿಗೆ ನೀರು ಸಮೃದ್ಧ ಪಂಚಾಯತ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಲಭಿಸಿ 75 ಲಕ್ಷ ರೂ. ಬಹುಮಾನ ದೊರೆತಿದೆ. ಕಾರ್ಕಳದ ಸಾನೂರು ಗ್ರಾಮ ಪಂಚಾಯತಿಗೆ ಮೂಲಸೌಕರ್ಯದಲ್ಲಿ ಸ್ವಾವಲಂಬಿ ಪಂಚಾಯತ್ ವಿಭಾಗದಲ್ಲಿ ತೃತೀಯ ಪ್ರಶಸ್ತಿ ಲಭಿಸಿ 25 ಲಕ್ಷ ರೂ. ಬಹುಮಾನ ಸಿಕ್ಕಿದೆ ಹಾಗೂ ಕುಂದಾಪುರದ ಹಕ್ಲಾಡಿ ಗ್ರಾಮ ಪಂಚಾಯತಿಗೆ ಸಾಮಾಜಿಕವಾಗಿ ನ್ಯಾಯಯುತ ಮತ್ತು ಸುರಕ್ಷಿತ ವಿಭಾಗದಲ್ಲಿ ತೃತೀಯ ಪ್ರಶಸ್ತಿ ದೊರೆತು 25 ಲಕ್ಷ ರೂ. ಪುರಸ್ಕಾರ ಪಡೆದಿದೆ. ಒಟ್ಟಾರೆ ಆರು ಪ್ರಶಸ್ತಿಗಳಲ್ಲಿ ಉಡುಪಿ ಜಿಲ್ಲೆಯು ಐದು ಪ್ರಶಸ್ತಿಗಳನ್ನು ಪಡೆದು ಗಮನಸೆಳೆದಿದ್ದು, ಈ ಸಾಧನೆಗೆ ಕಾರಣರಾದ ಎಲ್ಲಾ ಪಂಚಾಯತ್ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದಿಸಿದ್ದಾರೆ.




