
ಬೆಳಗಾವಿ/ಮಂಗಳೂರು: ಗೃಹ ಲಕ್ಷ್ಮಿ ಯೋಜನೆಯ ಮಾರ್ಚ್ ತಿಂಗಳ ಬಾಕಿ ಉಳಿದಿರುವ ಕಂತು ಮುಂದಿನ ನಾಲ್ಕೈದು ದಿನಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದ್ದು, ಏಪ್ರಿಲ್ ತಿಂಗಳ ಕಂತು ಕೂಡ ಇನ್ನು ಹತ್ತು ದಿನಗಳೊಳಗೆ ಪಾವತಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಕನೂರ ಗ್ರಾಮದಲ್ಲಿ ನಡೆದ ಶ್ರೀ ಮಹಾಲಕ್ಷ್ಮೀ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸುವ ಮೂಲಕ ಈ ಕ್ಷೇತ್ರವನ್ನು ಬಾರಾಮತಿ ಮಾದರಿಯಲ್ಲಿ ರೂಪಿಸುವ ಕನಸು ಹೊಂದಿದ್ದೇನೆ ಎಂದು ಹೇಳಿದರು. ಇದೇ ವೇಳೆ ಯಾರ ಹೆಸರನ್ನೂ ಉಲ್ಲೇಖಿಸದೆ ಹಿಂದಿನ ಪ್ರತಿನಿಧಿಗಳ ವಿರುದ್ಧ ಟೀಕಿಸಿದ ಅವರು, ಅಭಿವೃದ್ಧಿ ಕಾರ್ಯಗಳಿಗೆ ಬದಲು “ಹಿಂದುತ್ವ ರಾಜಕಾರಣ”ಕ್ಕೆ ಮಾತ್ರ ಒತ್ತು ನೀಡಲಾಗಿದೆ ಎಂದು ಆರೋಪಿಸಿದರು. ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮೃತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸುಮಾರು 22 ಕೋಟಿ ರೂ. ಹಣ ಜಮೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಜಿಲ್ಲಾ ಪಂಚಾಯತ್ ಸಭೆಯಲ್ಲಿ ಅಧ್ಯಕ್ಷ ಭರತ್ ಮುಂಡೋಡಿ ಈ ಬಗ್ಗೆ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಂಡು ಅನಧಿಕೃತವಾಗಿ ಜಮೆಯಾಗಿರುವ ಹಣವನ್ನು ಹಿಂಪಡೆಯಲು ಹಾಗೂ ತಪ್ಪು ದಾಖಲೆಗಳನ್ನು ಸರಿಪಡಿಸಲು ಸೂಚನೆ ನೀಡಿದ್ದಾರೆ. ನಿಷ್ಕ್ರಿಯ ಖಾತೆಗಳಿಗೆ ಹಣ ವರ್ಗಾವಣೆ ಹಾಗೂ ದಾಖಲೆಗಳಲ್ಲಿನ ವ್ಯತ್ಯಾಸಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಸಮಗ್ರ ತನಿಖೆಗೆ ಆದೇಶಿಸಿ ಮುಂದಿನ ಸಭೆಗೆ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 4,25,759 ಪಡಿತರ ಚೀಟಿದಾರರಿದ್ದು, ಅವರಲ್ಲಿ 3,82,178 ಫಲಾನುಭವಿಗಳು ಈಗಾಗಲೇ ನೋಂದಾಯಿತವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಮೃತ ಫಲಾನುಭವಿಗಳ ಹೆಸರುಗಳನ್ನು ತಕ್ಷಣ ಪಟ್ಟಿಯಿಂದ ತೆಗೆದುಹಾಕಲು ಹಾಗೂ ಸಂಬಂಧಿತ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.




