ಚೆನ್ನೈ: ಕೋಲ್ಕತ್ತಾದಿಂದ ಚೆನ್ನೈಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಡ ಎಂಜಿನ್ ದಿಢೀರ್ ವಿಫಲಗೊಂಡ ಪರಿಣಾಮ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಫುಲ್ ಎಮರ್ಜೆನ್ಸಿ’ ಘೋಷಿಸಲಾಗಿದ್ದು, ಪೈಲಟ್ ಸಮಯಪ್ರಜ್ಞೆಯಿಂದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಮೂಲಕ ಭಾರಿ ಅನಾಹುತವೊಂದು ತಪ್ಪಿದೆ. ಆಗಸ್ಟ್ 11ರ ರಾತ್ರಿ ಕೋಲ್ಕತ್ತಾದಿಂದ ಹೊರಟಿದ್ದ ಇಂಡಿಗೋ 6E-723 ವಿಮಾನದಲ್ಲಿ ಲ್ಯಾಂಡಿಂಗ್ಗೆ ಸಿದ್ಧವಾಗುತ್ತಿದ್ದ ವೇಳೆ ಎಡ ಎಂಜಿನ್ ಕಾರ್ಯನಿರ್ವಹಿಸದಿರುವುದು ಪೈಲಟ್ ಗಮನಕ್ಕೆ ಬಂದಿದ್ದು, ತಕ್ಷಣ ಏರ್ ಟ್ರಾಫಿಕ್ ಕಂಟ್ರೋಲ್ಗೆ ಮಾಹಿತಿ ನೀಡಲಾಗಿದೆ. ವಿಮಾನದಲ್ಲಿ ಒಟ್ಟು 224 ಪ್ರಯಾಣಿಕರು ಹಾಗೂ ಸಿಬ್ಬಂದಿ ಇದ್ದರು. ಪರಿಸ್ಥಿತಿಯ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ರಾತ್ರಿ 11.29ಕ್ಕೆ ‘ಫುಲ್ ಎಮರ್ಜೆನ್ಸಿ’ ಘೋಷಿಸಿ ಅಗ್ನಿಶಾಮಕ ವಾಹನಗಳು, ಆಂಬುಲೆನ್ಸ್ ಹಾಗೂ ವೈದ್ಯಕೀಯ ತಂಡಗಳನ್ನು ರನ್ವೇ ಬಳಿ ಸಜ್ಜುಗೊಳಿಸಲಾಗಿತ್ತು. ಬಳಿಕ ವಿಮಾನವನ್ನು ರನ್ವೇ 25ರಲ್ಲಿ ರಾತ್ರಿ 11.37ಕ್ಕೆ ಸುರಕ್ಷಿತವಾಗಿ ಇಳಿಸಲಾಗಿದ್ದು, ವಿಮಾನದಲ್ಲಿದ್ದ ಎಲ್ಲಾ 224 ಮಂದಿ ಯಾವುದೇ ಗಾಯ ಅಥವಾ ಅಪಾಯವಿಲ್ಲದೆ ಸುರಕ್ಷಿತವಾಗಿದ್ದಾರೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕವೂ ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ತಂಡಗಳು ಸನ್ನದ್ಧವಾಗಿದ್ದವು. ರಾತ್ರಿ 11.47ಕ್ಕೆ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಹಿಂಪಡೆಯಲಾಗಿದ್ದು, ಚೆನ್ನೈ ವಿಮಾನ ನಿಲ್ದಾಣದ ವಿಮಾನ ಸಂಚಾರ ಕಾರ್ಯಾಚರಣೆಗಳು ಸಹಜ ಸ್ಥಿತಿಗೆ ಮರಳಿವೆ. ಎಡ ಎಂಜಿನ್ನಲ್ಲಿ ಉಂಟಾದ ತಾಂತ್ರಿಕ ದೋಷದ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದ್ದು, ವಿಮಾನದ ತಾಂತ್ರಿಕ ಪರಿಶೀಲನೆ ಹಾಗೂ ಘಟನೆಗೆ ಸಂಬಂಧಿಸಿದ ತನಿಖೆ ನಡೆಯಲಿದೆ.
