
ಚಾಮರಾಜನಗರ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಜಿ ರಾಜ್ಯಪಾಲರಾದ ಬಿ ರಾಚಯ್ಯನವರ ಜನ್ಮದಿನ ಹಾಗೂ ಕೊಡುಗೆಗಳ ಕುರಿತು ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಜರುಗಿತು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಅವರು ರಾಚಯ್ಯನವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಮಾತನಾಡುತ್ತಾ ಚಾಮರಾಜನಗರ ಜಿಲ್ಲೆಯ ಶ್ರೇಷ್ಠ ವ್ಯಕ್ತಿಯಾಗಿ ಇಡೀ ಭಾರತಕ್ಕೆ ಮಾದರಿಯಾದ ರಾಜಕೀಯ ಬದುಕು ನಡೆಸಿ ನಿಷ್ಠೆ, ಪ್ರಾಮಾಣಿಕತೆ, ಸಾಮಾಜಿಕ ನ್ಯಾಯ,ಅಭಿವೃದ್ಧಿ, ಸರಳತೆ,ಮಾನವೀಯ ಮೌಲ್ಯಗಳ ಶ್ರೇಷ್ಠ ಜೀವನವನ್ನು ನಡೆಸಿ ಯುವಕರಿಗೆ ಮಾದರಿಯಾದ ಮಹಾವ್ಯಕ್ತಿ. ಶ್ರೇಷ್ಠ ರಾಜಕಾರಣ ಹಾಗೂ ಅಭಿವೃದ್ಧಿಯ ದೃಷ್ಟಿಕೋನದ ವ್ಯಕ್ತಿ. ಚಾಮರಾಜನಗರದ ಆಲೂರು ಗ್ರಾಮದವರು ಎಂಬುದು ಮತ್ತಷ್ಟು ಹೆಮ್ಮೆಯನ್ನು ತರುತ್ತದೆ. ಶಾಸಕರಾಗಿ,ಸಂಸದರಾಗಿ, ರಾಜ್ಯಸಭಾ ಸದಸ್ಯರಾಗಿ, ರಾಜ್ಯಪಾಲರಾಗಿ ವಿವಿಧ ಸಮಿತಿಗಳ ಸದಸ್ಯ,ಅಧ್ಯಕ್ಷರಾಗಿ, ರೇಷ್ಮೆ,ತೋಟಗಾರಿಕೆ, ಕೃಷಿ, ಪಶುಪಾಲನೆ,ಅರಣ್ಯ ಹಾಗೂ ಗೃಹ ಸಚಿವರಾಗಿ ಸೇವೆ ಸಲ್ಲಿಸಿ ಸಾವಿರಾರು ಜನರಿಗೆ ಉದ್ಯೋಗ ಮತ್ತು ಭೂಮಿಯನ್ನು ನೀಡಿದ ಮಹಾ ವ್ಯಕ್ತಿ. ಬಡ ಜನರ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡು ಅವರ ಅಭಿವೃದ್ಧಿಗೆ ತಮ್ಮದೇ ಆದ ದೂರ ದೃಷ್ಟಿಯ ಮೂಲಕ ಆಡಳಿತದ ಪರಿ ವ್ಯಾಪ್ತಿಯಲ್ಲಿ ಅಪಾರ ಸಹಾಯ ಮಾಡಿ ಜನರಿಗೆ ಪ್ರಿಯರಾದವರು ರಾಚಯ್ಯನವರು. ಇಡೀ ತಮ್ಮ ಜೀವಿತಾವಧಿಯಲ್ಲಿ ಸೇವೆ ಸಲ್ಲಿಸಿದ ರಾಚಯ್ಯನವರು ರಾಜಕಾರಣಕ್ಕೆ ಮಾದರಿಯಾದವರು. ರಾಜಕಾರಣ ಎಂದರೆ ಬಹು ದೂರ ಸಾಗುವ ಇಂದಿನ ವಿದ್ಯಾವಂತ ಯುವಕರು ಮತ್ತು ವಿದ್ಯಾರ್ಥಿಗಳು ಇವರ ಜೀವನವನ್ನು ಅಧ್ಯಯನ ಮಾಡಿದಾಗ ರಾಜಕಾರಣಕ್ಕೆ ಪ್ರವೇಶಿಸಿ ಶುದ್ಧ ಭಾರತವನ್ನು ನಿರ್ಮಾಣ ಮಾಡಲು ಬಿ ರಾಚಯ್ಯ ರಂತಹ ವ್ಯಕ್ತಿತ್ವದ ಅಧ್ಯಯನ ಅನಿವಾರ್ಯ ಮತ್ತು ಅಗತ್ಯವೆಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್ ಕಹಳೆ ಮಾತನಾಡಿ ಚಾಮರಾಜನಗರ ತಾಲೂಕು ಆಲೂರು ಗ್ರಾಮದಲ್ಲಿ ಜನಿಸಿ ಸಾಮಾಜಿಕ ಮೌಲ್ಯಗಳ ಮೂಲಕ ಸರ್ವ ಜನರ ಪ್ರೀತಿ ಗಳಿಸಿ ಶಾಸಕರಾಗಿ ಸಂಸದರಾಗಿ ಸಚಿವರಾಗಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿ ಇತಿಹಾಸದಲ್ಲಿ ದಾಖಲೆ ಸೇವೆ ಸಲ್ಲಿಸಿದ್ದಾರೆ. ಆಲೂರಿನಲ್ಲಿರುವ ಬಿರಾಚಯ್ಯನವರ ಸ್ಮಾರಕಕ್ಕೆ ಭೇಟಿ ನೀಡಿ ಅವರಿಗೆ ಸಂದಿರುವ ಗೌರವವನ್ನು ನಾವೆಲ್ಲರೂ ಅವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜನಪದ ಗಾಯಕರು ಹಾಗೂ ಮುಖಂಡರಾದ ಸುರೇಶ್ ನಾಗ್ ಹರದನಹಳ್ಳಿ ಮಾತನಾಡಿ ಚಾಮರಾಜನಗರದ ಸುವರ್ಣಾವತಿ ಚಿಕ್ಕಹೊಳೆ ಜಲಾಶಯವನ್ನು ನಿರ್ಮಿಸಿ ಚಾಮರಾಜನಗರ ಜಿಲ್ಲೆಗೆ ಸಾವಿರಾರು ಎಕರೆ ಭೂಮಿಗೆ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಎಲ್ಲಡೆ ಬಗೆಹರಿಸಿದವರು. ಚಾಮರಾಜನಗರದ ನೂರಾರು ಯುವಕರಿಗೆ ಉದ್ಯೋಗವನ್ನು ನೀಡಿ, ರೈತರಿಗೆ ಭೂಮಿಯನ್ನು ನೀಡಿ, ಸ್ವಾವಲಂಬನೆಯ ಬದುಕನ್ನು ನಡೆಸಲು ಶಕ್ತಿ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಬಿರಾಚಯ್ಯನವರ ಕುರಿತು ಪ್ರತಿ ವರ್ಷ ಕಾರ್ಯಕ್ರಮವನ್ನು ರೂಪಿಸಿ ಸಾರ್ವಜನಿಕರಿಗೆ ಆದರ್ಶ ವ್ಯಕ್ತಿಗಳ ಮಹತ್ವವನ್ನು ತಿಳಿಸುವ ಕಾರ್ಯ ಮಾಡುತ್ತಿರುವ ಅಧ್ಯಕ್ಷರಾದ ಋಗ್ವೇದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಪದ್ಮಾಪುರುಷೋತ್ತಮ್ ಮಾತನಾಡಿ ರಾಚಯ್ಯನವರು ಬಹು ಎತ್ತರಕ್ಕೆ ಬೆಳೆದು ಅಧಿಕಾರ ಹಾಗೂ ಸೇವೆಗೆ ಹೊಸ ಅರ್ಥ ಬರೆದವರು. ಅಧಿಕಾರ ಸಿಕ್ಕಿದಾಗ ಜನರಿಗೆ ಹೇಗೆ ಸಹಾಯ ಮಾಡಬೇಕು ಎಂಬುದನ್ನು ಇವರ ಕಾರ್ಯ ತಿಳಿಸುತ್ತದೆ. ಜಿಲ್ಲೆಯ ಅಣೆಕಟ್ಟು ನಿರ್ಮಾಣ, ರಸ್ತೆ ನಿರ್ಮಾಣ, ನೀರಾವರಿ,ಅಚ್ಚುಕಟ್ಟು ಪ್ರದೇಶ, ಅರಣ್ಯ ಸಂರಕ್ಷಣೆ,ಕೈಗಾರಿಕೆ ಪಟ್ಟಣದ ಡಿಪ್ಲೋಮೋ ಕಾಲೇಜುಗಳ ಸ್ಥಾಪನೆ,ಅರಣ್ಯ ಪ್ರದೇಶದ ಜನರಿಗೆ ವಸತಿ ಸೌಲಭ್ಯ ಹಾಗೂ ಶಿಕ್ಷಣ ವ್ಯವಸ್ಥೆಯನ್ನು ನೀಡಿದ ಮಹಾತ್ಮರು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ ಸರಸ್ವತಿ ಬಿಕೆ ಆರಾಧ್ಯ, ಶ್ರಾವ್ಯ ಎಸ್ ಋಗ್ವೇದಿ ಮಹದೇವ, ಮದನ್, ಕುಮಾರ್, ಮುಂತಾದವರು ಇದ್ದರು.




