
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಯಲ್ಲಿ ಕೊನೆಯ ಕ್ಷಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಎಐಸಿಸಿ ಬಿಡುಗಡೆ ಮಾಡಿದ ನೂತನ ಸಚಿವರ ಪಟ್ಟಿಯಲ್ಲಿ ಭಟ್ಕಳ ಶಾಸಕ ಮಂಕಾಳು ವೈದ್ಯ ಅವರ ಹೆಸರು ಕಾಣಿಸಿಕೊಂಡಿದ್ದರೂ, ಬಳಿಕ ಅದು ಟೈಪಿಂಗ್ ಮಿಸ್ಟೇಕ್ನಿಂದ ಸೇರಿದ್ದಾಗಿದೆ ಎಂದು ಎಐಸಿಸಿ ಸ್ಪಷ್ಟನೆ ನೀಡಿದೆ. ಇದರೊಂದಿಗೆ ಮಂಕಾಳು ವೈದ್ಯ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ಅವರ ಬದಲಿಗೆ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಸಚಿವರಾಗಿ ಆಯ್ಕೆ ಮಾಡಲಾಗಿದೆ. ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಮಂಕಾಳು ವೈದ್ಯ ಅವರು ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಲು ಯತ್ನಿಸಿದರೂ, ಸಿಎಂ ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಮಂಕಾಳು ವೈದ್ಯ, “ನಾನು ಸಿಎಂ ಅವರನ್ನು ಭೇಟಿ ಮಾಡಿಲ್ಲ, ಅವರು ಸಿಕ್ಕಿಲ್ಲ. ಮತ್ತೆ ಬರುತ್ತೇನೆ” ಎಂದಷ್ಟೇ ಹೇಳಿ ನಿವಾಸದಿಂದ ತೆರಳಿದರು.




