ಶೃಂಗೇರಿ: ತಾಲ್ಲೂಕಿನ ಬಿಜಿಎಸ್ ಸೈನ್ಸ್ ಪಿಯು ಕಾಲೇಜಿನಲ್ಲಿ 2026-27ನೇ ಸಾಲಿನ ನೂತನ ಸೈನ್ಸ್ ಕ್ಲಬ್ ಅಸ್ತಿತ್ವಕ್ಕೆ ಬಂದಿದ್ದು, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿವಿಧ ಪದಾಧಿಕಾರಿಗಳನ್ನು ವಿದ್ಯಾರ್ಥಿಗಳ ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ, ಸಂಶೋಧನಾ ಆಸಕ್ತಿ ಹಾಗೂ ಹೊಸ ಆಲೋಚನೆಗಳನ್ನು ಬೆಳೆಸುವ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಕಾಲೇಜಿನಲ್ಲಿ ಸೈನ್ಸ್ ಕ್ಲಬ್ ಕಾರ್ಯನಿರ್ವಹಿಸುತ್ತಿದೆ. ಕ್ಲಬ್ ಮೂಲಕ ವಿಜ್ಞಾನ ಮಾದರಿ ತಯಾರಿಕೆ, ವಿಜ್ಞಾನ ಪ್ರದರ್ಶನ, ಪ್ರಯೋಗಗಳು, ರಸಪ್ರಶ್ನೆ, ಪೋಸ್ಟರ್ ತಯಾರಿಕೆ, ಪ್ರಬಂಧ ಸ್ಪರ್ಧೆ ಹಾಗೂ ವೈಜ್ಞಾನಿಕ ವಿಚಾರ ಸಂಕಿರಣ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ವಿಜ್ಞಾನ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ನೂತನ ಸೈನ್ಸ್ ಕ್ಲಬ್ ಅಧ್ಯಕ್ಷರಾಗಿ ಯತಿರಾಜ್ ಎನ್.ಎನ್. ಗೌಡ, ಉಪಾಧ್ಯಕ್ಷರಾಗಿ ಯಶ್ವಿನ್ ಗೌಡ, ಕಾರ್ಯದರ್ಶಿಗಳಾಗಿ ಚಿರಾಗ್ ಗೌಡ, ಸಹ ಕಾರ್ಯದರ್ಶಿಯಾಗಿ ಆರಾಧ್ಯ ಕೆ.ಎನ್., ಖಜಾಂಚಿಯಾಗಿ ತನುಶ್ ಬಿ.ಕೆ. ಆಯ್ಕೆಯಾಗಿದ್ದಾರೆ. ಸಾಂಸ್ಕೃತಿಕ, ಕ್ರೀಡಾ, ಶಿಸ್ತು ಪಾಲನೆ ಹಾಗೂ ಗ್ರಂಥಾಲಯ ಸೇರಿದಂತೆ ವಿವಿಧ ಜವಾಬ್ದಾರಿಗಳಿಗೆ ವಿದ್ಯಾರ್ಥಿಗಳನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಿಜ್ಞಾನ ತಜ್ಞರೊಂದಿಗೆ ಸಂವಾದ, ವಿಜ್ಞಾನ ಪ್ರವಾಸ, ಕಾರ್ಯಾಗಾರಗಳು, ಸಂಶೋಧನಾ ಆಧಾರಿತ ಚಟುವಟಿಕೆಗಳು ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಈ ಕುರಿತು ಮಾತನಾಡಿದ ಶ್ರೀಗುಣನಾಥ ಸ್ವಾಮೀಜಿಗಳು, ಕಳೆದ 20 ವರ್ಷಗಳಿಂದ ಸೈನ್ಸ್ ಕ್ಲಬ್, ಸೈನ್ಸ್ ಲ್ಯಾಬ್ ಹಾಗೂ ಸೈನ್ಸ್ ಪಾರ್ಕ್ ಸೇರಿದಂತೆ ಹಲವು ಯೋಜನೆಗಳನ್ನು ಗ್ರಾಮೀಣ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇದರ ಫಲವಾಗಿ ನೂರಾರು ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಉದ್ಯೋಗ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶ ಸಮೃದ್ಧಿಯಾಗಿ, ಅಲ್ಲಿನ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕನಸು ಇದೀಗ ಸಾಕಾರಗೊಳ್ಳುತ್ತಿದೆ ಎಂದು ಹೇಳಿದರು.
