
ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಅದ್ಧೂರಿಯಾಗಿ ನಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ನಾಯಕ ಸಿ.ಟಿ. ರವಿ, ಇದು ವ್ಯಕ್ತಿ ವೈಭವದ ಕಾರ್ಯಕ್ರಮವಲ್ಲ, ವ್ಯಕ್ತಿತ್ವದ ಗುಣಗಾನಕ್ಕಾಗಿ ನಡೆಯುತ್ತಿರುವ ಕಾರ್ಯಕ್ರಮ, ನಮ್ಮಲ್ಲಿ ವ್ಯಕ್ತಿ ವೈಭವದ ಪದ್ಧತಿ ಇಲ್ಲ ಎಂದು ಹೇಳಿದರು. ಚಾರಿತ್ರ್ಯವಂತರು ಚರಿತ್ರೆ ನಿರ್ಮಾಣ ಮಾಡುವುದಕ್ಕೆ ಬರುತ್ತಾರೆ, ಚರಿತ್ರೆ ನಿರ್ಮಾಣಕ್ಕಾಗಿಯೇ ಭಗವಂತ ಮೋದಿ ಅವರನ್ನು ಭೂಮಿಗೆ ಕಳುಹಿಸಿದ್ದಾನೆ ಎಂದು ಹೇಳಿದ ಅವರು, ಯುಗಪುರುಷ ನರೇಂದ್ರ ಮೋದಿ ಅವರಿಗೆ ದೇವರು ಪೂರ್ಣಾಯುಷ್ಯ ಹಾಗೂ ಉತ್ತಮ ಆರೋಗ್ಯ ನೀಡಲಿ ಎಂದು ಆಶಿಸಿದರು. ದೇಶದಲ್ಲಿ ಹಲವು ಮಂದಿ ಪ್ರಧಾನಿಯಾಗಿದ್ದು, ನೆಹರೂ, ಇಂದಿರಾಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರೂ ಕಡಿಮೆ ಪ್ರಭಾವಿಗಳಾಗಿರಲಿಲ್ಲ, ಕಡಿಮೆ ಜನಪ್ರಿಯತೆ ಹೊಂದಿರಲಿಲ್ಲ ಎಂದು ಉಲ್ಲೇಖಿಸಿದರು. ಮೋದಿ ಸಂಸತ್ ಮೆಟ್ಟಿಲುಗಳಿಗೆ ನಮಸ್ಕರಿಸಿ ಸಂಸತ್ತು ಪ್ರಜಾದೇಗುಲ ಎಂದು ಹೇಳುವ ಮೂಲಕ ಅಧಿಕಾರ ಅಹಂಕಾರದ ರಾಜಕಾರಣಕ್ಕಾಗಿ ಅಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು. ವಾಜಪೇಯಿ ಪ್ರಧಾನಿಯಾಗಿದ್ದಾಗ ಲಾಹೋರ್ಗೆ ಬಸ್ ಸೇವೆ ಆರಂಭಿಸಿ ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂಬ ಸಂದೇಶ ನೀಡಿದ್ದರು, ಆದರೆ ಈಗ ‘ಅಲ್ಲೇ ಡ್ರಾ, ಅಲ್ಲೇ ಬಹುಮಾನ’ ಎಂಬುದನ್ನು ಮೋದಿ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಭಯೋತ್ಪಾದಕರು ಮೀಸೆ ತಿರುಗಿಸುತ್ತಿದ್ದ ಕಾಲವಿತ್ತು, ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ ಎಂದ ಸಿ.ಟಿ. ರವಿ, ವಿದೇಶಿ ನೆಲದಲ್ಲೂ ಕೇವಲ ಮೋದಿ ಘೋಷಣೆ ಮಾತ್ರವಲ್ಲ, ಭಾರತ್ ಮಾತಾಕೀ ಜೈ ಎಂಬ ಘೋಷಣೆಯೂ ಕೇಳಿಬರುತ್ತಿದೆ ಎಂದರು. ಈ ಸಂಭ್ರಮ ಹೆಚ್ಚು ಕಾಲ ಅಧಿಕಾರದಲ್ಲಿದ್ದವರದ್ದಲ್ಲ, ಅವರು ಹೇಗೆ ಬದುಕಿದರು ಎಂಬುದನ್ನು ಸ್ಮರಿಸುವ ಸಂಭ್ರಮವಾಗಿದ್ದು, ಮೋದಿ ಅವರ ಆಯಸ್ಸು ಮತ್ತು ಆರೋಗ್ಯಕ್ಕಾಗಿ ಮನೆ ಮನೆಯಲ್ಲಿ ಆಯುಷ್ಯ ದೀಪ ಹಚ್ಚೋಣ ಎಂದು ಕರೆ ನೀಡಿದರು.
ವರದಿ: ಸಂತೋಷ್ ಅತ್ತಿಗೆರೆ




