
ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಹುಣಸಘಟ್ಟ ಗ್ರಾಮದ ಮುದುಗುಂಡಿ ತಾಂಡ್ಯದಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ನಿನ್ನೆ ತಡರಾತ್ರಿ ನಾಯಿ ಬೇಟೆಯ ಉದ್ದೇಶದಿಂದ ಗ್ರಾಮಕ್ಕೆ ಬಂದಿದ್ದ ಚಿರತೆ ನಾಯಿಗೂಡಿಗೆ ನುಗ್ಗಿ ಅಲ್ಲೇ ಸಿಕ್ಕಿಬಿದ್ದಿತ್ತು. ಬೆಳಗ್ಗೆ ನಾಯಿಗೂಡಿಯಲ್ಲಿ ಚಿರತೆ ಇರುವುದನ್ನು ಕಂಡ ಗ್ರಾಮಸ್ಥರು ಆತಂಕಗೊಂಡಿದ್ದು, ಜನವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಶಿವಮೊಗ್ಗದಿಂದ ಅರವಳಿಕೆ ತಜ್ಞರನ್ನು ಕರೆಸಿ ಕಾರ್ಯಾಚರಣೆ ನಡೆಸಿದರು. ಬಳಿಕ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು. ಕಾರ್ಯಾಚರಣೆ ವೇಳೆ ಯಾರಿಗೂ ಯಾವುದೇ ತೊಂದರೆ ಉಂಟಾಗದೇ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸೆರೆ ಹಿಡಿದ ಚಿರತೆಯನ್ನು ಬಳಿಕ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಚಿರತೆ ಸೆರೆ ಕಾರ್ಯಾಚರಣೆಯನ್ನು ವೀಕ್ಷಿಸಲು ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದು, ಚಿರತೆ ಸೆರೆ ಬಳಿಕ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.



