
ಬೆಂಗಳೂರು: ಕರ್ನಾಟಕ ಸರ್ಕಾರ ಪೊಲೀಸ್ ಕಾನ್ಸ್ಟೆಬಲ್ಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, 3,991 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 2 ರಂದು ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆ ನಡೆಯಲಿದ್ದು, ಬರೋಬ್ಬರಿ 4,54,536 ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಕನಿಷ್ಠ ಅರ್ಹತೆ ಇದ್ದರು ಕೂಡ ಪದವೀಧರರು, ಸ್ನಾತಕೋತ್ತರ ಪದವೀಧರರು, ಇಂಜಿನಿಯರಿಂಗ್ ಪದವೀಧರರು ಹಾಗೂ ಪಿಎಚ್ಡಿ ಪದವೀಧರರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರೋದು ಕಂಡುಬಂದಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರಾಜ್ಯದ ಕಲ್ಯಾಣ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕೇತರ ಪ್ರದೇಶಗಳಲ್ಲಿ ಪರೀಕ್ಷೆಯನ್ನು ನಡೆಸುತ್ತಿದೆ. ಒಟ್ಟು ಹುದ್ದೆಗಳಲ್ಲಿ 3,395 ಹುದ್ದೆಗಳು ಕಲ್ಯಾಣ ಕರ್ನಾಟಕೇತರ ಪ್ರದೇಶಕ್ಕೆ ಹಾಗೂ 596 ಹುದ್ದೆಗಳುಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿದ್ದು, ಇದರ ಜೊತೆಗೆ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ, ವಿಶೇಷ ಮೀಸಲು ಪೊಲೀಸ್ ಪಡೆ, ಸಿಟಿ ಆರ್ಮ್ಡ್ ರಿಸರ್ವ್ ಹಾಗೂ ಜಿಲ್ಲಾ ಆರ್ಮ್ಡ್ ರಿಸರ್ವ್ ಸೇರಿ ಇತರೆ ವಿಭಾಗಗಳ 3,934 ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೂ ಆರಂಭಗೊಂಡಿದ್ದು, ಅವುಗಳ ಪರೀಕ್ಷೆಯೂ ಶೀಘ್ರದಲ್ಲೇ ನಡೆಯಲಿದೆ. ರಾಜ್ಯ ಸರ್ಕಾರ ಸಿವಿಲ್ ಹಾಗೂ ಇತರೆ ವಿಭಾಗಗಳನ್ನು ಸೇರಿ ಒಟ್ಟು 7,925 ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿಯನ್ನು ಘೋಷಿಸಿದೆ.




