
ಶೃಂಗೇರಿ: ಶೃಂಗೇರಿ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಶಾಸಕರ ಆಯ್ಕೆ ಅಸಿಂಧುವಾದ ಪ್ರಕರಣಕ್ಕೆ ಶೃಂಗೇರಿ ಕ್ಷೇತ್ರ ಸಾಕ್ಷಿಯಾಗಿದೆ. 2023 ರಲ್ಲಿ ನಡೆದ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಗೆಲುವು ಸಾಧಿಸಿದ್ದು, ಈ ಗೆಲುವಿನ ವಿರುಧ್ಧ ಬಿ.ಜೆ.ಪಿ ಅಭ್ಯರ್ಥಿ ಡಿ.ಎನ್ ಜೀವರಾಜ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಹೈಕೋರ್ಟ್ ಆದೇಶದಂತೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮಾ.3ರಂದು ಭಾನುವಾರ ಬೆಳಗಿನ ಜಾವ ಮುಕ್ತಾಯಗೊಂಡ ಮರು ಮತಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಗೌರವ್ ಶೆಟ್ಟಿ ಅಧಿಕೃತವಾಗಿ ಘೋಷಿಸಿದ್ದು, ಈ ಫಲಿತಾಂಶ ಕಾಂಗ್ರೆಸ್ಗೆ ಆಘಾತ ಉಂಟುಮಾಡಿದೆ.

ಕೋರ್ಟ್ ನಿರ್ದೇಶನದಂತೆ ನಡೆದ ಮರುಎಣಿಕೆಯಲ್ಲಿ ಆರಂಭದಿಂದಲೇ ಜೀವರಾಜ್ ಅವರಿಗೆ ಮುನ್ನಡೆ ದೊರಕಿದ್ದು, ಅಂತಿಮವಾಗಿ ಸುಮಾರು 52 ಮತಗಳ ಅಂತರದಿಂದ ಗೆಲುವು ಸಾಧಿಸಿದರೆಂದು ತಿಳಿದುಬಂದಿದೆ. ಮರುಎಣಿಕೆ ವೇಳೆ 1,540 ಮತಗಳಲ್ಲಿ 255 ಮತಗಳು ಅಸಿಂಧುವಾಗಿದ್ದು, ಜೀವರಾಜ್ ಅವರಿಗೆ ಬಂದ ಮತಗಳಲ್ಲಿ 2 ಮತಗಳು ಅಮಾನ್ಯವಾಗಿದ್ದವು. ಒಟ್ಟು 1,822 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕೃತವಾಗಿದ್ದು, 2023ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಟಿ.ಡಿ. ರಾಜೇಗೌಡ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆಗ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮತಎಣಿಕೆ ವೇಳೆ ಇಬ್ಬರು ಗೈರಾಗಿದ್ದರು. ಇದೀಗ ಮರುಎಣಿಕೆಯ ನಂತರ ಅಂಚೆ ಮತಗಳ ಲೆಕ್ಕಾಚಾರದಲ್ಲಿ ಜೀವರಾಜ್ ಅವರಿಗೆ 690 ಮತಗಳು ಲಭಿಸಿದ್ದರೆ, ಟಿ.ಡಿ. ರಾಜೇಗೌಡ ಅವರ ಮತಗಳು 255 ಅಮಾನ್ಯವಾಗಿ 314ಕ್ಕೆ ಇಳಿದಿವೆ ಎಂದು ಚುನಾವಣಾಧಿಕಾರಿ ವಿವರಿಸಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡುತ್ತಾ, “ಶೃಂಗೇರಿಯ ಮರುಎಣಿಕೆ ಫಲಿತಾಂಶ ಕಾಂಗ್ರೆಸ್ನ ಅಸಲಿ ಮುಖವನ್ನು ಬಯಲಿಗೆ ತಂದಿದ್ದು, 2023ರಲ್ಲಿ ತಿರಸ್ಕೃತ ಮತಗಳ ವಿರುದ್ಧ ಕಾನೂನು ಹೋರಾಟ ನಡೆಸಿದ್ದಕ್ಕೆ ಇಂದು ನ್ಯಾಯ ದೊರೆತಿದೆ. ಇದು ಪ್ರಜಾಪ್ರಭುತ್ವದ ಹಾಗೂ ಮತದಾರರ ಹಕ್ಕಿನ ಗೆಲುವು” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.




