ಮೈಸೂರು: ಭಾರತೀಯ ಚಿತ್ರರಂಗ ಕಂಡ ಅದ್ಭುತ ಹಿನ್ನೆಲೆ ಗಾಯಕಿ ಎಸ್ ಜಾನಕಿ. 20ಕ್ಕೂ ಹೆಚ್ಚು ದೇಶ ವಿದೇಶಿಯ ಭಾಷೆಗಳಲ್ಲಿ 48000 ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಕೋಟ್ಯಾಂತರ ಕಲಾ ರಸಿಕರ ಹೃದಯದಲ್ಲಿ ನೆಲೆಸಿರುವ ಸಂಗೀತದ ತಾಯಿ ಎಸ್ ಜಾನಕಿ ಎಂದು ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷರು , ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಮೈಸೂರಿನ ಗಾನಚಂದನ ಕಲಾ ಬಳಗ ನಾದಬ್ರಹ್ಮ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಗದ ಗಾಯಕಿ ನಮ್ಮ ಜಾನಕಿ ಗೀತ ಗಾಯನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಲಕ್ಷಾಂತರ ಗಾಯಕರಿಗೆ ಆದರ್ಶ ಗಾಯಕಿಯಾಗಿ, ಸರಳ ಹಾಗೂ ಮೇರು ವ್ಯಕ್ತಿತ್ವದ ನಾದ ದೇವತೆಯಾಗಿ, ಭಾಷೆ, ಗಡಿ, ಧರ್ಮದ ಬಂಧನವಿಲ್ಲದೆ ಜಗತ್ತಿಗೆ ತಮ್ಮ ಧ್ವನಿಯ ಮೂಲಕ ಸದಾ ಕಾಲ ಹಚ್ಚಹಸಿರಾಗಿ ಧ್ವನಿ ತರಂಗಗಳ ಮೂಲಕ ಜಾನಕಿಯವರು ಸರ್ವರಿಗೂ ನೆಮ್ಮದಿಯನ್ನು ನೀಡಿದ್ದಾರೆ. ಬಹು ಎತ್ತರಕ್ಕೆ ಬೆಳೆದಿರುವ ಜಾನಕಿ ರವರು ಎಲ್ಲಾ ಕಲಾವಿದರ ಗಾಯನವನ್ನು ಕೇಳುವ ಸೌಜನ್ಯವನ್ನು ಬೆಳೆಸಿಕೊಂಡಿರುವ ಮಹಾ ಧ್ರುವ ತಾರೆ ಯಾಗಿದ್ದಾರೆ.1957ರಲ್ಲಿ ಹಾಡುಗಾರಿಕೆ ಆರಂಭಿಸಿದ ಜಾನಕೀ 2027 ಕ್ಕೆ 70 ವರ್ಷಗಳು ಆಗಲಿದೆ. ಉತ್ತಮ ಕಾರ್ಯಕ್ರಮ ರೂಪಿಸೋಣ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ವಿ ರಾಜೀವ್ ಉದ್ಘಾಟಿಸಿ ಮಾತನಾಡಿ ಗಾನ ಚಂದನ ಕಲಾ ಬಳಗ ಮೈಸೂರಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕಲಾವಿದರು ಸದಾ ಕಾಲ ಕ್ರಿಯಾಶೀಲರಾಗಿದ್ದು ತಮ್ಮ ಗಾಯನವನ್ನು ಅರ್ಪಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಮೈಸೂರಿನಲ್ಲಿ ವೃತ್ತಿ ಕಲಾವಿದರು, ಹವ್ಯಾಸಿ ಕಲಾವಿದರು ನಿರಂತರವಾಗಿ ಕಲಾ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಜಾನಕಿ ಅಮ್ಮನವರು ತಮ್ಮ ಅದ್ಭುತ ಧ್ವನಿ ವೈವಿಧ್ಯತೆಗಳ ಮೂಲಕ ವಿಶೇಷವಾಗಿ ಗಾಯನವನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಕನ್ನಡಿಗರ ಮನಸ್ಸಿನಲ್ಲಿ ನಮ್ಮ ಜಾನಕಿ ಯಾಗಿ ಉಳಿದಿದ್ದಾರೆ. ಜಾನಕಿ ಅವರ ಹಾಡುಗಳಿಗೆ ಕೇಳುಗರು ಸದಾ ಕಾಲ ಇದ್ದಾರೆ ಎಂಬುದಕ್ಕೆ ಇಡೀ ಸಭಾಂಗಣ ತುಂಬಿ ನಿಂತು ಕೇಳುತ್ತಿರುವುದೇ ಸಾಕ್ಷಿ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಗಾನ ಚಂದನ ಕಲಾ ಬಳಗದ ಸಂಘಟಕರಾದ ಆರ್.ಸುಧೀಂದ್ರ ರವರು ಮಾತನಾಡಿ ನಮ್ಮ ಸಂಸ್ಥೆ ವರ್ಷಕ್ಕೆ ಮೂರು ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಕನ್ನಡ ಗೀತೆಗಳ ಗಾಯನದ ಮೂಲಕ ಕೇಳುಗರಿಗೆ ವಿಶೇಷವಾಗಿ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಪ್ರತಿವರ್ಷ ನೀಡುತ್ತಾ ಬಂದಿದ್ದೇವೆ. ಜಾನಕೀ ರವರು ಶ್ರೇಷ್ಠ ಹಿನ್ನೆಲೆ ಗಾಯಕಿಯಾಗಿ, ಸಂಗೀತ ನಿರ್ದೇಶಕರಾಗಿ, ಉತ್ತಮ ಛಾಯಾಗ್ರಾಹಕಿ ಯಾಗಿ, ಸರಳ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿ ಸಾವಿರಾರು ಕಲಾವಿದರಿಗೆ ಮಾನಸ ಗುರುವಾಗಿ ಇದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರಾದ ನಾಗರಾಜ ಭೈರಿ, ಶಿವ ಡೆವ ಲಪರ್ಸ್ ಮಾಲೀಕರಾದ ಸೋಮಸುಂದರ್, ವೈದ್ಯರು ಮತ್ತು ಗಾಯಕರಾದ ಡಾ. ನಟ ಶೇಖರ್, ಇದ್ದರು.ಕಾರ್ಯಕ್ರಮದ ಸಂಘಟಕರಾದ ವಿಶ್ವನಾಥ್ ಶಾಸ್ತ್ರೀ, ಆರ್.ನಟರಾಜು, ಶ್ರೀನಿವಾಸ್, ಹೆಚ್ ಎಸ್ ಗೋಪಾಲಕೃಷ್ಣ, ಶ್ರೀಮತಿ ಶಶಿಕಲಾ, ನಾಗಲಕ್ಷ್ಮಿ, ಅಶ್ವಿನಿ ಪ್ರಶಾಂತ್,ಗಿರಿಜಾ ರವರು 5 ಗಂಟೆಗಳ ಕಾಲ ನಿರಂತರವಾಗಿ ಜಾನಕಿ ರವರ ವಿವಿಧ ಗೀತೆಗಳನ್ನು ಹಾಡುವ ಮೂಲಕ ಕಲಾ ಪ್ರೇಮಿಗಳನ್ನು ರಂಜಿಸಿದರು. ಪ್ರತಿ ಹಾಡಿಗೂ ಕರತಾಡನಗಳ ಮೂಲಕ ಗಾಯಕರನ್ನು ಪ್ರೋತ್ಸಾಹಿಸಿದ್ದು, ಇಡೀ ಸಭಾಂಗಣ ತುಂಬಿ ಕಾರ್ಯಕ್ರಮಕ್ಕೆ ಶೋಭೆಯನ್ನು ತಂದಿತು.
