ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕೋರ್ ವಲಯದಲ್ಲಿ ಯುವಕರ ತಂಡ ಖಾಸಗಿ ತೆರೆದ ಜೀಪಿನಲ್ಲಿ ಅಕ್ರಮವಾಗಿ ಪ್ರವೇಶಿಸಿ ಸಫಾರಿ ಮಾದರಿಯಲ್ಲಿ ಮೋಜು-ಮಸ್ತಿ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ವಲಯ ಹಾಗೂ ಲಕ್ಕವಳ್ಳಿ ಸಮೀಪದ ಭದ್ರಾ ಟೈಗರ್ ರಿಸರ್ವ್ ಪ್ರದೇಶದಲ್ಲಿ ನಡೆದಿರುವ ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವೈರಲ್ ವಿಡಿಯೋದಲ್ಲಿ ಯುವಕರು ಕಾಡಿನಲ್ಲಿ ಸ್ವಚ್ಛಂದವಾಗಿ ಸಂಚರಿಸುತ್ತಿದ್ದ ಆನೆಗಳ ಸಮೀಪ ತೆರಳಿ ಬೆದರಿಸುವುದು, ಕೂಗಾಟ-ಕಿರುಚಾಟ ನಡೆಸುವುದು ಹಾಗೂ ರೀಲ್ಸ್ ಚಿತ್ರೀಕರಣ ಮಾಡುವ ದೃಶ್ಯಗಳು ಕಂಡುಬಂದಿವೆ. ಈ ವೇಳೆ ಕೋಪಗೊಂಡ ಕಾಡಾನೆ ಓಪನ್ ಜೀಪ್ ಅನ್ನು ಅಟ್ಟಿಸಿಕೊಂಡು ಬಂದಿರುವುದೂ ವಿಡಿಯೋದಲ್ಲಿ ದಾಖಲಾಗಿದೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ರೀತಿಯ ವರ್ತನೆ ವನ್ಯಜೀವಿ ಸಂರಕ್ಷಣಾ ನಿಯಮಗಳ ಉಲ್ಲಂಘನೆಯಾಗಿದ್ದು, ಅರಣ್ಯ ಇಲಾಖೆ ಕಣ್ಣೆದುರೇ ಕೋರ್ ಪ್ರದೇಶದಲ್ಲಿ ಇಂತಹ ಮೋಜು-ಮಸ್ತಿಗೆ ಅವಕಾಶ ಹೇಗೆ ಸಿಕ್ಕಿತು ಎಂಬ ಪ್ರಶ್ನೆಗಳು ಉದ್ಭವಿಸಿವೆ. ರಾಜಕೀಯ ಪ್ರಭಾವ ಬಳಸಿ ಯುವಕರು ಅರಣ್ಯ ಪ್ರದೇಶಕ್ಕೆ ಪ್ರವೇಶ ಪಡೆದರಾ ಎಂಬ ಅನುಮಾನಗಳೂ ವ್ಯಕ್ತವಾಗಿವೆ. ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಯುವಕರ ಜೀವಕ್ಕೂ ಅಪಾಯ ಉಂಟಾಗಿದ್ದು, ವನ್ಯಜೀವಿಗಳಿಗೂ ತೊಂದರೆಯಾಗಿರುವುದಾಗಿ ಪರಿಸರವಾದಿಗಳು ಆರೋಪಿಸಿದ್ದಾರೆ. ಸಂಬಂಧಿಸಿದ ಜೀಪ್ ಅನ್ನು ವಶಪಡಿಸಿಕೊಂಡು ಯುವಕರ ವಿರುದ್ಧ ಕಠಿಣ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದು, ಈ ಘಟನೆ ಭದ್ರಾ ಟೈಗರ್ ರಿಸರ್ವ್ ಭದ್ರತೆ ಕುರಿತು ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
