
ಚಿಕ್ಕಮಗಳೂರು: ಮೂಡಿಗೆರೆ ರಸ್ತೆಯಲ್ಲಿರುವ ಪ್ರಸಿದ್ಧ ವೈನ್ ಅಂಡ್ ಡೈನ್ ಹೋಟೆಲ್ನ ಫ್ರೂಟ್ ಸಲಾಡ್ನಲ್ಲಿ ಹಾವಿನಂತಿರುವ ‘ಹ್ಯಾಮರ್ಹೆಡ್’ ಜಂತು ಪತ್ತೆಯಾಗಿದೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬೆನ್ನಲ್ಲೇ, ಹೋಟೆಲ್ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ತೋರಿಸಿರುವ ಜಂತು ಸಲಾಡ್ನ ಒಳಭಾಗದಲ್ಲಿ ಇರಲಿಲ್ಲ. ಅದು ಸಂಪೂರ್ಣ ಜೀವಂತವಾಗಿದ್ದು, ಸಲಾಡ್ನೊಂದಿಗೆ ಯಾವುದೇ ಸಂಪರ್ಕ ಹೊಂದಿರುವ ಕುರುಹುಗಳೂ ಕಂಡುಬಂದಿಲ್ಲ ಎಂದು ಹೋಟೆಲ್ ಮಾಲೀಕ ಥಾಮಸ್ ತಿಳಿಸಿದ್ದಾರೆ. ಈ ಘಟನೆ ಹೋಟೆಲ್ನ ಹೆಸರಿಗೆ ಧಕ್ಕೆ ತರುವ ಉದ್ದೇಶದಿಂದ ಪೂರ್ವನಿಯೋಜಿತವಾಗಿ ಮಾಡಿರುವ ಷಡ್ಯಂತ್ರ ಎಂದು ಅವರು ಆರೋಪಿಸಿದ್ದಾರೆ. ಘಟನೆ ನಡೆದ ತಕ್ಷಣ ಗ್ರಾಹಕರೊಂದಿಗೆ ಮಾತನಾಡಿ, ಅಗತ್ಯವಿದ್ದರೆ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಗಿತ್ತು. ಆದರೆ ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಅದನ್ನು ಡಿಲೀಟ್ ಮಾಡಲು ಹಣದ ಬೇಡಿಕೆ ಇಡಲಾಗಿತ್ತು ಎಂದು ಥಾಮಸ್ ಆರೋಪಿಸಿದ್ದಾರೆ. ಹಣದ ಬೇಡಿಕೆಗೆ ಹೋಟೆಲ್ ಆಡಳಿತ ಮಂಡಳಿ ಮಣಿಯದೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದೆ ಎಂದು ತಿಳಿಸಿದ್ದಾರೆ. ಇನ್ನು ಘಟನೆ ಕುರಿತು ಮಾಹಿತಿ ಲಭಿಸಿದ ಬಳಿಕ ಸ್ಥಳಕ್ಕೆ ಆಗಮಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್ ಹಾಗೂ ಅಡುಗೆ ಕೋಣೆಯನ್ನು ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ಯಾವುದೇ ಲೋಪದೋಷಗಳು ಕಂಡುಬಂದಿಲ್ಲ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ವಿಡಿಯೋದಲ್ಲಿ ಕಂಡುಬಂದ ಜಂತುವನ್ನು ಪ್ರಯೋಗಾಲಯ ಪರೀಕ್ಷೆಗೆ ನೀಡುವಂತೆ ಅಧಿಕಾರಿಗಳು ಕೇಳಿದ್ದರೂ, ಗ್ರಾಹಕರು ಅದರ ಮಾದರಿಯನ್ನು ನೀಡದೆ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಥಾಮಸ್ ಹೇಳಿದ್ದಾರೆ. ಕಳೆದ ಐದು ವರ್ಷಗಳಿಂದ ಕುಟುಂಬ ಸಮೇತ ಆಗಮಿಸುವ ಗ್ರಾಹಕರಿಗೆ ಶುಚಿ ಹಾಗೂ ಗುಣಮಟ್ಟದ ಆಹಾರ ಸೇವೆ ನೀಡಲಾಗುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಕಿವಿಗೊಡಬಾರದು ಎಂದು ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ.




