ಮಂಗಳೂರು: ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕೆಎಸ್ಆರ್ಟಿಸಿಯಿಂದ ಉತ್ತಮ ಅವಕಾಶವೊಂದು ದೊರೆತಿದೆ. ಪುತ್ತೂರು ವಿಭಾಗದಲ್ಲಿ ಖಾಲಿ ಇರುವ ವಿವಿಧ ಶಿಶಿಕ್ಷು, ಅಂದರೆ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನವಾಗಿದ್ದು, ಆಗಸ್ಟ್ 31ರಂದು ನೇರ ಸಂದರ್ಶನ ನಡೆಯಲಿದೆ. ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಮೆಕ್ಯಾನಿಕ್ ಡೀಸೆಲ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಎಲೆಕ್ಟ್ರೀಷಿಯನ್, ಮೋಟಾರ್ ಮೆಕ್ಯಾನಿಕ್ ವೆಹಿಕಲ್, ವೆಲ್ಡರ್, ಫಿಟ್ಟರ್, ಮೋಟಾರ್ ವೆಹಿಕಲ್ ಬಾಡಿ ಬಿಲ್ಡರ್ ಹಾಗೂ ಮೆಕ್ಯಾನಿಕ್ ಆಟೋಮೊಬೈಲ್ ಸೇರಿದಂತೆ ವಿವಿಧ ಟ್ರೇಡ್ಗಳಲ್ಲಿ ಒಟ್ಟು 117 ಸ್ಥಾನಗಳು ಲಭ್ಯವಿವೆ. ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಮೆಕ್ಯಾನಿಕ್ ಡೀಸೆಲ್ ವಿಭಾಗದಲ್ಲಿ 33 ಸ್ಥಾನಗಳಿದ್ದು, ಎರಡು ವರ್ಷಗಳ ತರಬೇತಿ ಅವಧಿ ಇರಲಿದೆ. ಐಟಿಐ ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ₹9,600 ತರಬೇತಿ ಭತ್ಯೆ ನೀಡಲಾಗುತ್ತದೆ. ಎಸ್ಎಸ್ಎಲ್ಸಿ ಅಭ್ಯರ್ಥಿಗಳಿಗೆ ಮೊದಲನೇ ವರ್ಷ ₹8,200 ಮಾಸಿಕ ಭತ್ಯೆ ಹಾಗೂ ಎರಡನೇ ವರ್ಷ ತರಬೇತಿ ನಡೆಯುವ ಘಟಕಕ್ಕೆ ಅನುಗುಣವಾಗಿ ₹9,020ರಿಂದ ₹9,250ರವರೆಗೆ ಮಾಸಿಕ ಭತ್ಯೆ ದೊರೆಯಲಿದೆ. ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಎಸ್ಎಸ್ಎಲ್ಸಿ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ನಿಯಮಾನುಸಾರ ಎಸ್ಸಿ, ಎಸ್ಟಿ ಹಾಗೂ ಸೈನಿಕರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಅನ್ವಯವಾಗಲಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನ. ಆನ್ಲೈನ್ನಲ್ಲಿ ನೋಂದಣಿ ಮಾಡಿದ ಬಳಿಕ ಅರ್ಜಿಯ ಪ್ರತಿಯನ್ನು ಪುತ್ತೂರು ಕೆಎಸ್ಆರ್ಟಿಸಿ ವಿಭಾಗೀಯ ಕಚೇರಿಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಇನ್ನು ಆಗಸ್ಟ್ 31ರಂದು ಬೆಳಿಗ್ಗೆ 10 ಗಂಟೆಗೆ ಪುತ್ತೂರು ಕೆಎಸ್ಆರ್ಟಿಸಿ ವಿಭಾಗೀಯ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದ್ದು, ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಆಯ್ಕೆ ಸಮಿತಿಯ ಮುಂದೆ ಹಾಜರಾಗಬೇಕು. ಸಂದರ್ಶನಕ್ಕೆ ಬರುವಾಗ ಎಸ್ಎಸ್ಎಲ್ಸಿ, ಐಟಿಐ ಅಥವಾ ಪಿಯುಸಿ ಮೂಲ ಅಂಕಪಟ್ಟಿಗಳು, ಜನ್ಮದಿನಾಂಕದ ದಾಖಲೆ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ನ ಎರಡು ಪ್ರತಿಗಳು, ಬ್ಯಾಂಕ್ ಪಾಸ್ಬುಕ್ನ ಎರಡು ಪ್ರತಿಗಳು, ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ದೃಢೀಕರಣ ಪತ್ರ, ಇ-ಮೇಲ್ ಐಡಿ ಹಾಗೂ ಇತ್ತೀಚಿನ ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳನ್ನು ತರಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯಲ್ಲಿರುವ ವಿದ್ಯಾರ್ಹತೆ, ವಯೋಮಿತಿ ಹಾಗೂ ದಾಖಲೆಗಳ ವಿವರಗಳನ್ನು ಪರಿಶೀಲಿಸಿ, ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
