
ಹಗರಿಬೊಮ್ಮನಹಳ್ಳಿ : ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ನಾಣ್ಯಾಪುರ ಗ್ರಾಮದಿಂದ ಕೆಲ ಕಿಲೋಮೀಟರ್ ಅಂತರದಲ್ಲಿ ಪುರಾತನ ಕಾಲದ ವೀರಗಲ್ಲೊಂದು ಹಲವು ವರ್ಷಗಳ ಹಿಂದೆಯೇ ಪತ್ತೆಯಾಗಿದ್ದರೂ ಇದೀಗ ಬೆಳಕಿಗೆ ಬಂದಿದೆ. ಆಂಜನೇಯ ದೇವರು ಹಾಗೂ ವೀರಪ್ಪ ಎಂದು ಕರೆಯಲಾಗುವ ಈ ವೀರಗಲ್ಲು ನಿಧಿಗಳ್ಳರ ಕಣ್ಣಿಗೆ ಬಿದ್ದು, ಇತ್ತೀಚೆಗೆ ಕಳ್ಳತನಕ್ಕೆ ಯತ್ನಿಸಿರುವುದು ತಿಳಿದುಬಂದಿದೆ. ಸುಮಾರು ಮೂರು ಅಡಿ ಎತ್ತರ ಹಾಗೂ ಮೂರು ಅಡಿ ಅಗಲದ ಕಾಡುಗಲ್ಲಿನಲ್ಲಿ ವೀರನ ಚಿತ್ರವನ್ನು ಕೆತ್ತಲಾಗಿದ್ದು, ಅದರ ಪಕ್ಕದಲ್ಲಿ ಸುಲಭವಾಗಿ ಅರ್ಥವಾಗದ ಹಳೇಗನ್ನಡದ ಲಿಪಿಯೂ ಕೆತ್ತಲಾಗಿದೆ. ನಿಧಿಗಳ್ಳರಿಂದ ವೀರಗಲ್ಲಿಗೆ ಮತ್ತಷ್ಟು ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪುರಾತತ್ವ ಹಾಗೂ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಅಧಿಕಾರಿಗಳು ಶೀಘ್ರ ಸ್ಥಳಕ್ಕೆ ಭೇಟಿ ನೀಡಿ ವೀರಗಲ್ಲನ್ನು ಸಂರಕ್ಷಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜೊತೆಗೆ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ನಾಣ್ಯಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿದ್ದು, ಸಂಬಂಧಿಸಿದ ಇಲಾಖೆಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.




