
ಚಾಮರಾಜನಗರ: ಕನ್ನಡ ರಂಗಭೂಮಿಯಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯ ಮೂಲಕ ನಾಟಕ ರಚಿಸಿ ಕನ್ನಡ ನಾಟಕಗಳಿಗೆ ವಿಶ್ವಮಟ್ಟದಲ್ಲಿ ಗೌರವ ತಂದುಕೊಟ್ಟ ಟಿ.ಪಿ. ಕೈಲಾಸಂ ಅವರನ್ನು ಕನ್ನಡ ಪ್ರಹಸನ ಪಿತಾಮಹ ಎಂದು ಸಂಸ್ಕೃತಿ ಚಿಂತಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಸ್ಮರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಟಿ.ಪಿ. ಕೈಲಾಸಂ ಅವರ ಕೊಡುಗೆಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾರ್ಜ್ ಬರ್ನಾರ್ಡ್ ಷಾ ಅವರ ನಾಟಕಗಳಿಂದ ಪ್ರಭಾವಿತರಾಗಿದ್ದ ಕೈಲಾಸಂ ಅವರು ತಮ್ಮದೇ ಆದ ವಿಶಿಷ್ಟ ಸಾಹಿತ್ಯ ಶೈಲಿಯಲ್ಲಿ ಹಲವು ನಾಟಕ, ಕವನ ಹಾಗೂ ಕಾದಂಬರಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಹೊಸತನ ನೀಡಿದರು ಎಂದು ಹೇಳಿದರು. ಕೈಲಾಸಂ ಅವರ ‘ಟೊಳ್ಳು ಗಟ್ಟಿ’, ‘ಕೋಂ ರೋಲ್’, ‘ಬಹಿಷ್ಕಾರ’, ‘ಸತ್ತವನ ಸಂತಾಪ’, ‘ಅಮ್ಮಾವ್ರ ಗಂಡ’, ‘ಪೋಲಿಕಿಟ್ಟಿ’ ಸೇರಿದಂತೆ ಹಲವು ನಾಟಕಗಳು ರಂಗಭೂಮಿಯಲ್ಲಿ ಹೊಸ ಕ್ರಾಂತಿ ಮೂಡಿಸಿದ್ದು, ಆಧುನಿಕ ಕನ್ನಡ ರಂಗಭೂಮಿಯ ಹರಿಕಾರರಾಗಿ ಅವರು ಗುರುತಿಸಿಕೊಂಡಿದ್ದಾರೆ ಎಂದರು. 1945ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕೈಲಾಸಂ ಅವರು ಸರಳ, ಸುಂದರ ಹಾಗೂ ಚೊಕ್ಕವಾದ ಅಧ್ಯಕ್ಷೀಯ ಭಾಷಣ ಮಾಡಿದ್ದರು ಎಂದು ಸ್ಮರಿಸಿದರು. ಜನಪದ ಗಾಯಕ ರವಿಚಂದ್ರ ಪ್ರಸಾದ್ ಕಹಳೆ ಅವರು ಕೈಲಾಸಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ, ಗ್ರಾಮೀಣ ಪ್ರದೇಶಗಳಲ್ಲಿಯೂ ಕೈಲಾಸಂ ಅವರ ನಾಟಕಗಳು ವ್ಯಾಪಕವಾಗಿ ಪ್ರದರ್ಶನಗೊಂಡು ಅನೇಕ ಕಲಾವಿದರ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು. ಇಂದಿನ ದಿನಗಳಲ್ಲಿ ನಾಟಕ ರಚನೆಯ ಮೌಲ್ಯ ಕಳೆದುಕೊಳ್ಳುತ್ತಿರುವುದು ದುರಂತವಾಗಿದ್ದು, ಕಲಾವಿದರಿಗೆ ಹೊಸ ವಿಚಾರಗಳು ಮತ್ತು ಹೊಸ ಶೈಲಿಯ ನಾಟಕಗಳ ಅಗತ್ಯವಿದೆ ಎಂದು ಹೇಳಿದರು. ಪ್ರಾಚಾರ್ಯ ಹಾಗೂ ಗಾಯಕ ಕಾಗಲವಾಡಿ ರಂಗಸ್ವಾಮಿ ಅವರು ಕೈಲಾಸಂ ಅವರ ಗಾಯನ ಹಾಗೂ ವಿಶಿಷ್ಟ ಸಾಹಿತ್ಯ ಜನಪದ ಸೊಗಡಿನೊಂದಿಗೆ ಹೊಸತನ ಮೂಡಿಸಿದ್ದು, ಅವರ ಹಾಡುಗಳು ಲಕ್ಷಾಂತರ ಕೇಳುಗರನ್ನು ತಲುಪಿವೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗಮೂರ್ತಿ, ನಿವೃತ್ತ ಶಿಕ್ಷಕಿ ಸರಸ್ವತಿ, ಶಿವರಾಮ್, ಮಹೇಶ್, ಸುರೇಶ್ ದೊಡ್ಡಮೋಳೆ, ಆನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಟಿ.ಪಿ. ಕೈಲಾಸಂ ಅವರ ಗಾಯನ ಕಾರ್ಯಕ್ರಮವೂ ನಡೆಯಿತು.




