
ಶೃಂಗೇರಿ : ಶೃಂಗೇರಿ ತಾಲೂಕು ಸರ್ಕಾರಿ ಪ್ರೌಢಶಾಲೆ ತೊರೆಹಡ್ಲು ಶಾಲೆಯ ಹಳೆ ವಿದ್ಯಾರ್ಥಿನಿ ಕುಮಾರಿ ಸ್ನೇಹ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಇದೇ ಸೆಪ್ಟೆಂಬರ್ 19ರಿಂದ ಜಪಾನಿನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದ ಎರಡು ರಿಲೇ ಸ್ಪರ್ಧೆಗಳಲ್ಲಿ ಸ್ನೇಹ ಅವರು ಭಾರತ ತಂಡದ ಪರ ಕಣಕ್ಕಿಳಿಯಲಿದ್ದು, ಈ ಹಿಂದೆ ಗ್ರೀಸ್ನಲ್ಲಿ ನಡೆದ 4×100 ಮೀಟರ್ ರಿಲೇ ಹಾಗೂ 4×100 ಮೀಟರ್ ಮಿಕ್ಸ್ಡ್ ರಿಲೇ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಏಷ್ಯನ್ ಕ್ರೀಡಾಕೂಟದಲ್ಲೂ ದೇಶದ ಕೀರ್ತಿ ಹೆಚ್ಚಿಸಲು ಸಜ್ಜಾಗಿದ್ದಾರೆ. ಶೃಂಗೇರಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆ ವಿದ್ಯಾರ್ಥಿನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ತಾಲೂಕಿನ ಜನತೆಗೆ ಹೆಮ್ಮೆಯ ಸಂಗತಿಯಾಗಿದ್ದು, ಗೆಲುವಿನೊಂದಿಗೆ ಮರಳಲಿ ಎಂದು ಶುಭ ಹಾರೈಸಿದ್ದಾರೆ.



