
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಎ.ಡಿ.ಎಲ್.ಆರ್. (ಸಹಾಯಕ ಭೂ ದಾಖಲೆಗಳ ನಿರ್ದೇಶಕರ) ಕಚೇರಿಯಲ್ಲಿ ಸರ್ವೇ ಸ್ಕೆಚ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಸರ್ಕಾರಿ ಸರ್ವೇಯರ್ ಸುಮಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದ ಮಂಜುನಾಥ್ ಎಂಬುವವರು ತಮ್ಮ ಜಮೀನಿನ ಅಲಿನೇಶನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆ ಸ್ವತ್ತಿಗೆ ಸಂಬಂಧಿಸಿದ ಸರ್ವೇ ಸ್ಕೆಚ್ ಪಡೆಯಲು ಕಚೇರಿಯನ್ನು ಸಂಪರ್ಕಿಸಿದ್ದರು. ಈ ವೇಳೆ ಸರ್ವೇ ಸ್ಕೆಚ್ ನೀಡಲು ₹20 ಸಾವಿರ ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂದು ಆರೋಪಿಸಲಾಗಿದೆ. ಲಂಚದ ಬೇಡಿಕೆಯಿಂದ ಮನನೊಂದ ಮಂಜುನಾಥ್ ಅವರು ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು.
ದೂರಿನ ಆಧಾರದ ಮೇಲೆ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಮೂಡಿಗೆರೆ ಪಟ್ಟಣದ ಎ.ಡಿ.ಎಲ್.ಆರ್. ಕಚೇರಿಯಲ್ಲೇ ದಾಳಿ ನಡೆಸಿದರು. ಈ ವೇಳೆ ಸರ್ವೇಯರ್ ಸುಮಾ ಅವರು ₹15 ಸಾವಿರ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಲಂಚದ ಹಣ ನೀಡುವಂತೆ ಎ.ಡಿ.ಎಲ್.ಆರ್. ಮಂಜೇಶ್ ಸೂಚಿಸಿದ್ದರು ಎನ್ನುವ ಆರೋಪವೂ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಡಿ.ಎಲ್.ಆರ್. ಮಂಜೇಶ್, ಸರ್ವೇಯರ್ ನಂದಿನಿ, ದೀಪಕ್ ಹಾಗೂ ಸುಮಾ ವಿರುದ್ಧ ಮಂಜುನಾಥ್ ಅವರು ದೂರು ನೀಡಿದ್ದರು. ಸರ್ವೇ ಇಲಾಖೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸುಮಾ ಅವರು ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿರುವುದು ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಮೂಡಿಗೆರೆ ಎ.ಡಿ.ಎಲ್.ಆರ್. ಕಚೇರಿ ಹಾಗೂ ಸರ್ವೇ ಇಲಾಖೆಯ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ರೈತರನ್ನು ವಿವಿಧ ಕೆಲಸಗಳಿಗಾಗಿ ಲಂಚಕ್ಕೆ ಒತ್ತಾಯಿಸಿ ಸತಾಯಿಸುತ್ತಿದ್ದಾರೆ ಎಂಬ ಆರೋಪಗಳು ಈ ಹಿಂದೆಯೂ ಕೇಳಿಬಂದಿದ್ದವು.
ಪ್ರಸ್ತುತ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಲಂಚದ ಬೇಡಿಕೆ ಹಾಗೂ ಇತರ ಅಧಿಕಾರಿಗಳ ಪಾತ್ರದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆ ಮೂಡಿಗೆರೆ ತಾಲೂಕಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ನಡೆಸುತ್ತಿರುವ ಕಾರ್ಯಾಚರಣೆಗೆ ಮತ್ತೊಂದು ಉದಾಹರಣೆಯಾಗಿದೆ.



