
ಕರ್ನಾಟಕದಲ್ಲಿ ಸರ್ಕಾರಿ ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿರುವ ಬಿ.ಎಡ್ ಹಾಗೂ ಸ್ನಾತಕೋತ್ತರ ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ ಸಿಕ್ಕಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಅಂದರೆ KREIS ಅಧೀನದ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ವಿವಿಧ ವಸತಿ ಶಾಲೆಗಳಲ್ಲಿ ಖಾಲಿಯಿರುವ ಒಟ್ಟು 767 ಗ್ರೂಪ್-ಸಿ ಶಿಕ್ಷಕರ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಂದರೆ KEA ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯಲ್ಲಿ 725 ಹೊಸ ಹುದ್ದೆಗಳು ಹಾಗೂ 42 ಹಿಂಬಾಕಿ ಹುದ್ದೆಗಳು ಸೇರಿವೆ.
ವಿಷಯವಾರು ಹುದ್ದೆಗಳು:
ಕನ್ನಡ – 103,
ಇಂಗ್ಲಿಷ್ – 108,
ಹಿಂದಿ – 55,
ಗಣಿತ – 103,
ವಿಜ್ಞಾನ – 106,
ಸಮಾಜ ವಿಜ್ಞಾನ – 154,
ಗಣಕಯಂತ್ರ – 57
ದೈಹಿಕ ಶಿಕ್ಷಣ – 81
• ಭಾಷಾ ಶಿಕ್ಷಕರ ಹುದ್ದೆಗೆ ಸಂಬಂಧಪಟ್ಟ ಭಾಷೆಯನ್ನು ಐಚ್ಛಿಕ ವಿಷಯವನ್ನಾಗಿ ಓದಿ ಕಲಾ ವಿಭಾಗದಲ್ಲಿ ಸ್ನಾತಕ ಪದವಿ ಅಂದರೆ BA ಜೊತೆಗೆ B.Ed ಪಡೆದಿರಬೇಕು.
• ಪದವಿಯಲ್ಲಿ ಸಂಬಂಧಪಟ್ಟ ಭಾಷೆಯನ್ನು ಐಚ್ಛಿಕವಾಗಿ ಓದಿರದಿದ್ದರೆ ಆ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಅಂದರೆ MA ಪಡೆದಿರಬೇಕು.
• ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ವಿಜ್ಞಾನ ವಿಭಾಗದಲ್ಲಿ ನಿರ್ದಿಷ್ಟ ವಿಷಯಗಳೊಂದಿಗೆ B.Sc ಪದವಿ ಹಾಗೂ ವಿಜ್ಞಾನ ಪದ್ಧತಿಯಲ್ಲಿ B.Ed ಅಗತ್ಯವಿದೆ.
• ಸಮಾಜ ವಿಜ್ಞಾನ ಶಿಕ್ಷಕರಿಗೆ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಭೂಗೋಳಶಾಸ್ತ್ರದಲ್ಲಿ ಯಾವುದಾದರೂ ಎರಡು ವಿಷಯಗಳನ್ನು ಐಚ್ಛಿಕವಾಗಿ ಓದಿ BA ಜೊತೆಗೆ B.Ed ಪಡೆದಿರಬೇಕು.
• ವಸತಿ ಶಾಲೆಗಳು ಆಂಗ್ಲ ಮಾಧ್ಯಮದಲ್ಲಿರುವುದರಿಂದ ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ತಮ್ಮ ಪದವಿಯನ್ನು ಕಡ್ಡಾಯವಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರಬೇಕು.
• ಗಣಕಯಂತ್ರ ಶಿಕ್ಷಕರ ಹುದ್ದೆಗೆ ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫಾರ್ಮೇಷನ್ ಸೈನ್ಸ್ನಲ್ಲಿ ಇಂಜಿನಿಯರಿಂಗ್, BCA ಅಥವಾ ಕಂಪ್ಯೂಟರ್ ಸೈನ್ಸ್ನೊಂದಿಗೆ B.Sc ಪದವಿ ಹೊಂದಿರಬೇಕು.
• ದೈಹಿಕ ಶಿಕ್ಷಣ ಶಿಕ್ಷಕರಿಗೆ ಯಾವುದೇ ಸ್ನಾತಕ ಪದವಿ ಜೊತೆಗೆ ದೈಹಿಕ ಶಿಕ್ಷಣದಲ್ಲಿ ಸ್ನಾತಕ ಪದವಿ ಅಂದರೆ B.P.Ed ಕಡ್ಡಾಯವಾಗಿದೆ.
• ಕಂಪ್ಯೂಟರ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ಹೊರತುಪಡಿಸಿ ಕ್ರಮ ಸಂಖ್ಯೆ 1ರಿಂದ 6ರವರೆಗಿನ ಉಳಿದ ಶಿಕ್ಷಕ ಹುದ್ದೆಗಳಿಗೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ KARTET ಪೇಪರ್-2 ಅಥವಾ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ CTETನಲ್ಲಿ ಅರ್ಹತೆ ಪಡೆದಿರಬೇಕು.
ಅರ್ಜಿ ಸಲ್ಲಿಸಲು ವಯೋಮಿತಿ:
ಇನ್ನು ವಯೋಮಿತಿಗೆ ಸಂಬಂಧಿಸಿದಂತೆ ಇತ್ತೀಚಿನ ಸರ್ಕಾರಿ ಆದೇಶದಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ, 2A, 2B, 3A ಹಾಗೂ 3B ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 48 ವರ್ಷ ಹಾಗೂ SC, ST ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್ಲೈನ್ OMR ಮಾದರಿಯಲ್ಲಿ ನಡೆಸಲಾಗುತ್ತದೆ. SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡವನ್ನು ಭಾಷೆಯಾಗಿ ಓದಿರದ ಅಭ್ಯರ್ಥಿಗಳಿಗೆ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದ್ದು, ಇದರಲ್ಲಿ ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಪತ್ರಿಕೆ-1ರಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ 100 ಪ್ರಶ್ನೆಗಳಿಗೆ 100 ಅಂಕಗಳು ಹಾಗೂ 2 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಪತ್ರಿಕೆ-2ರಲ್ಲಿ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ 100 ಪ್ರಶ್ನೆಗಳಿಗೆ 100 ಅಂಕಗಳು ಹಾಗೂ 2 ಗಂಟೆಗಳ ಕಾಲಾವಕಾಶ ಇರಲಿದೆ. ಈ ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಕೂಡ ಇದ್ದು, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತವಾಗಲಿದೆ.
ಅರ್ಜಿ ಶುಲ್ಕ:
ಅರ್ಜಿ ಶುಲ್ಕವನ್ನು ಗಮನಿಸುವುದಾದರೆ ಸಾಮಾನ್ಯ, 2A, 2B, 3A ಹಾಗೂ 3B ವರ್ಗದ ಅಭ್ಯರ್ಥಿಗಳಿಗೆ ಒಟ್ಟು 750 ರೂಪಾಯಿ ಶುಲ್ಕವಿದ್ದು, ಇದರಲ್ಲಿ 500 ರೂಪಾಯಿ ಅರ್ಜಿ ಶುಲ್ಕ ಹಾಗೂ 250 ರೂಪಾಯಿ ಪ್ರಕ್ರಿಯೆ ಶುಲ್ಕವಾಗಿದೆ. SC, ST, ಪ್ರವರ್ಗ-1, ಮಾಜಿ ಸೈನಿಕ ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಒಟ್ಟು 500 ರೂಪಾಯಿ ಶುಲ್ಕವಿದ್ದು, ಇದರಲ್ಲಿ 250 ರೂಪಾಯಿ ಅರ್ಜಿ ಶುಲ್ಕ ಮತ್ತು 250 ರೂಪಾಯಿ ಪ್ರಕ್ರಿಯೆ ಶುಲ್ಕವಾಗಿದೆ. ವಿಶೇಷ ಚೇತನ ಅಭ್ಯರ್ಥಿಗಳು ಕೇವಲ 250 ರೂಪಾಯಿ ಪ್ರಕ್ರಿಯೆ ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಸಲು ಕೊನೆ ದಿನ:
ಜುಲೈ 15, 2026ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆಗಸ್ಟ್ 13, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಗಸ್ಟ್ 14, 2026ರವರೆಗೆ ಶುಲ್ಕ ಪಾವತಿಸಬಹುದಾಗಿದೆ.
ಆಯ್ಕೆಯಾದ ಶಿಕ್ಷಕರಿಗೆ 2024ರ ಪರಿಷ್ಕೃತ ವೇತನ ಶ್ರೇಣಿಯಂತೆ ತಿಂಗಳಿಗೆ 54,175 ರೂಪಾಯಿಯಿಂದ 99,400 ರೂಪಾಯಿವರೆಗೆ ಆಕರ್ಷಕ ವೇತನದೊರೆಯಲಿದೆ. ಹೀಗಾಗಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸುವುದು ಒಳಿತು.
ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ **cetonline.karnataka.gov.in/kea/** ಮೂಲಕ ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಒಂದು ಬಾರಿ ಅರ್ಜಿ ಸಲ್ಲಿಸಿದ ನಂತರ ತಿದ್ದುಪಡಿಗೆ ಅವಕಾಶವಿರುವುದಿಲ್ಲ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು.




