ಕೊಟ್ಟಿಗೆಹಾರ: ಮಕ್ಕಳು ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಹಾಗೂ ಸನ್ಮಾರ್ಗದಲ್ಲಿ ಬೆಳೆಯುವಂತೆ ಪೋಷಕರು ಮಾರ್ಗದರ್ಶನ ನೀಡಬೇಕು. ಇಲ್ಲವಾದಲ್ಲಿ ಮಕ್ಕಳು ಬೆಳೆದಂತೆ ದಾರಿ ತಪ್ಪುವ ಸಾಧ್ಯತೆಗಳಿದ್ದು, ನಂತರ ಪೋಷಕರು ಪಶ್ಚಾತ್ತಾಪ ಪಡುವಂತಾಗುತ್ತದೆ ಎಂದು ಬಾಳೆಹೊನ್ನೂರು ವಿಜಯಮಾತೆ ಚರ್ಚ್ ಧರ್ಮಗುರು ಫಾ. ಪೌಲ್ ಡಿಸೋಜ ಅಭಿಪ್ರಾಯಪಟ್ಟರು. ಬಣಕಲ್ನ ನಜರೆತ್ ಆಂಗ್ಲ ಶಾಲೆಯಲ್ಲಿ ನಡೆದ 29ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಪೋಷಕರು ಮಕ್ಕಳನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಪ್ರೇರಣೆಯಾಗಬೇಕು ಎಂದು ತಿಳಿಸಿದರು. ನಿವೃತ್ತ ಪ್ರಾಂಶುಪಾಲೆ ಡಿ.ಬಿ. ಸವಿತಾ ಮಾತನಾಡಿ, ಮಕ್ಕಳನ್ನು ಬಾಲ್ಯದಿಂದಲೇ ಓದುವ ಯಂತ್ರಗಳನ್ನಾಗಿ ಮಾಡಬಾರದು. ಅವರ ಮೇಲೆ ಒತ್ತಡದ ಶಿಕ್ಷಣ ಹೇರದೆ, ಆಸಕ್ತಿ ಹಾಗೂ ಅಭಿರುಚಿಗೆ ಅನುಗುಣವಾಗಿ ಶಿಕ್ಷಣ ನೀಡಬೇಕು. ನೆರೆಹೊರೆಯ ಮಕ್ಕಳೊಂದಿಗೆ ಹೋಲಿಕೆ ಮಾಡಿ ಒತ್ತಡ ಹೇರುವ ಬದಲು, ಮಕ್ಕಳ ಆಸಕ್ತಿಗೆ ಪ್ರೋತ್ಸಾಹ ನೀಡಬೇಕು. ಮಕ್ಕಳನ್ನು ಪ್ರಯೋಗದ ವಸ್ತುಗಳನ್ನಾಗಿ ಮಾಡದೆ, ನಳನಳಿಸುವ ಹೂತೋಟದಂತೆ ಬೆಳೆಸಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು. ಶಾಲೆಯ ಪೋಷಕ ಅತಿಥಿ ಸುಂದರೇಶ್ ಮಾತನಾಡಿ, ನಜರೆತ್ ಶಾಲೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಶಿಕ್ಷಕರ ಪರಿಶ್ರಮ ಹಾಗೂ ಪೋಷಕರ ಸಹಕಾರ ಶಾಲೆಯ ಪ್ರಗತಿಗೆ ಪೂರಕವಾಗಿದೆ. ಶಾಲೆಯಲ್ಲಿ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದರೆ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು. ಶಾಲಾ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೊ ಶಿಕ್ಷಕರು ಹಾಗೂ ಪೋಷಕರ ಸಹಕಾರವನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎ.ಕೆ. ಸಂತೋಷ್ ಕುಮಾರ್, ತರುವೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರವಿಕಲಾ ಪೈ, ಮುಖಂಡ ವೇಣುಗೋಪಾಲ್ ಪೈ, ಶಾಲಾ ಆಡಳಿತ ವರ್ಗದ ಲವಕುಮಾರ್ ಸೇರಿದಂತೆ ಶಿಕ್ಷಕರು, ಪೋಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
