
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮತ್ತೆ ಆತಂಕ ಸೃಷ್ಟಿಸಿದ್ದು, ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಅಭಿನಂದನೆ ಸಲ್ಲಿಸುವ ವ್ಯಂಗ್ಯಭರಿತ ಬ್ಯಾನರ್ವೊಂದನ್ನು ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಗ್ರಾಮದಲ್ಲಿ ಅಳವಡಿಸಲಾಗಿದ್ದು, ಮಲೆನಾಡಿಗರ ಬದುಕನ್ನೇ ಕಸಿದುಕೊಳ್ಳಲು ಕಾಡಾನೆಗಳನ್ನು ತಂದು ಬಿಟ್ಟಿದ್ದಕ್ಕೆ ಧನ್ಯವಾದಗಳು, ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಬಿಡುತ್ತಿರುವ ಶಾಸಕರಿಗೆ ಅಭಿನಂದನೆ ಎಂದು ಬರೆದು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ, 25ನೇ ತಾರೀಖಿನವರೆಗೆ ಕಾಡಾನೆಗಳನ್ನು ಓಡಿಸುವುದಿಲ್ಲ ಎಂದು ಜಿಲ್ಲಾಡಳಿತ ಹಾಗೂ ಶಾಸಕರು ತಿಳಿಸಿದ್ದರೆನ್ನಲಾಗಿದೆ. ಹಾಸನದಿಂದ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿರುವ ಕಾಡಾನೆಗಳ ಹಿಂಡನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ 38 ಕಾಡಾನೆಗಳ ಗುಂಪು ಚದುರಿದ್ದು, ಸ್ಥಳೀಯರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಚಿಕ್ಕಮಗಳೂರು ತಾಲೂಕಿನ ಗೋಣಿಬೀಡು ಹೋಬಳಿಯ ಹತ್ತಾರು ಗ್ರಾಮಗಳಲ್ಲಿ ಕಾಡಾನೆಗಳ ಭೀತಿ ಎದುರಾಗಿದೆ. ಸದ್ಯ ಚಟ್ನಳ್ಳಿ ಬಳಿ ಓಲ್ಡ್ ಬೆಲ್ಟ್ ಕಾಡಾನೆಗಳ ಗುಂಪು ಬೀಡುಬಿಟ್ಟಿದೆ ಎನ್ನಲಾಗಿದ್ದು, ಗೌತಹಳ್ಳಿ, ಕಲ್ಲುಗುಡ್ಡ, ಹುಲಿಹಂಡ್ಲು, ಬಾರದಹಳ್ಳಿ, ಮೂಡಸಸಿ, ಕಮ್ಮಾರಗೋಡು, ನಂದೀಪುರ, ಮಾಕೋನಹಳ್ಳಿ ಹಾಗೂ ಹಾಂದಿಪುರ ಸೇರಿದಂತೆ ಹಲವು ಗ್ರಾಮಗಳ ಜನರು ಆತಂಕದಲ್ಲಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ತೋಟಗಳಿಗೆ ತೆರಳದಂತೆ ಅರಣ್ಯ ಇಲಾಖೆ ಸ್ಥಳೀಯರಿಗೆ ಸೂಚನೆ ನೀಡಿದೆ. ಒಟ್ಟಿನಲ್ಲಿ ಕಾಡಾನೆಗಳ ಹಾವಳಿಯಿಂದ ಮಲೆನಾಡಿನ ಗ್ರಾಮೀಣ ಭಾಗದ ಜನಜೀವನ ಆತಂಕದಲ್ಲಿದ್ದು, ಸಮಸ್ಯೆಗೆ ಪರಿಹಾರ ಯಾವಾಗ ಎಂಬ ಪ್ರಶ್ನೆ ಎದುರಾಗಿದೆ.





